ಇತ್ತೀಚೆಗೆ 6ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಹತ್ಯೆಗೈದ ಆರೋಪಿಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ಮೀರಾ-ಭಯಾಂದರ್‌ನಲ್ಲಿ ಸುಮಾರು ನೂರಕ್ಕೂ ಅಧಿಕ ಪುರುಷರನ್ನು ನಗ್ನಗೊಳಿಸಿ ಗಾಯದ ಗುರುತನ್ನು ಶೋಧಿಸಿರುವ ಘಟನೆ ನಡೆದಿದೆ.
ಆರು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ನಂತರ ಕೊಂದು ಭಯಾಂದರ್ ಚರಂಡಿಯಲ್ಲಿ ಎಸೆದು ಹೋಗಿದ್ದರು. ಜೂ.13ರಂದು ಬಾಲಕಿಯ ಶವ ಪತ್ತೆಯಾದ ನಂತರ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಆ ನಿಟ್ಟಿನಲ್ಲಿ 100ಕ್ಕೂ ಅಧಿಕ ಶಂಕಿತ ಪುರುಷರನ್ನು ಠಾಣೆಗೆ ಕರೆಸಿ ಅವರನ್ನು ಬೆತ್ತಲಾಗಿಸಿ ಅತ್ಯಾಚಾರದ ಸಂದರ್ಭದಲ್ಲಾದ ಗಾಯದ ಗುರುತನ್ನು ಪತ್ತೆ ಹಚ್ಚಲು ಮುಂದಾಗಿದ್ದರು.
ಈ ತನಿಖೆಯಿಂದ ಯಾವುದೇ ಪ್ರಯೋಜನವಾಗಿರದಿದ್ದರೂ ತೀವ್ರವಾದ ತನಿಖೆಯಿಂದಾಗಿ ಪ್ರಕಾಶ್ ಕೇವತ್ ಎಂಬವನ ಮನೆಯಲ್ಲಿ ಬಾಲಕಿಯ ರಕ್ತಸಿಕ್ತ ಒಳಉಡುಪು ಸಿಕ್ಕಿದೆ. ಕೇವತ್‌ನನ್ನು ಬಂಧಿಸಿ ನ್ಯಾಯಾಲಯದಲ್ಲಿ ಪಡಿಸಿದಾಗ ಜೂ.23ರ ತನಕ ಕಸ್ಟಡಿಗೊಪ್ಪಿಸಲಾಗಿದೆ.
ಏತನ್ಮಧ್ಯೆ ನೂರು ಮಂದಿಯ ಬಟ್ಟೆ ಬಿಚ್ಚಿಸಿದ ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.