ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮನೆಯೇ ಒಂದು ಹಳ್ಳಿ: ಒಬ್ಬನಿಗೆ 38 ಹೆಂಡ್ತೀರು, 94 ಮಕ್ಳು!
(Largest family in the world | Baktawng | Chana sect | Mizoram)
ಮನೆಯೇ ಒಂದು ಹಳ್ಳಿ: ಒಬ್ಬನಿಗೆ 38 ಹೆಂಡ್ತೀರು, 94 ಮಕ್ಳು!
ಬಕ್ತಾವಾಂಗ್, ಮಂಗಳವಾರ, 22 ಜೂನ್ 2010( 12:33 IST )
ವಸುಧೈವ ಕುಟುಂಬಕಂ ಎಂಬ ವೇದವಾಕ್ಯವನ್ನು ಇಲ್ಲಿ ತಿದ್ದಲಾಗಿದೆ. ಯಾಕೆಂದರೆ ಇವರ ಮನೆಯೇ ವಿಶ್ವ ಮತ್ತು ಇಷ್ಟು ದೊಡ್ಡ ಕುಟುಂಬ ಜಗತ್ತಿನಲ್ಲೇ ಇಲ್ಲ ಎಂದು ಹೇಳಲಾಗುತ್ತಿದೆ. ಈ ಮನೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆಯೇ 162.
ಈ ಮನೆಯಿರುವುದು ಭಾರತದ ಈಶಾನ್ಯ ರಾಜ್ಯ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ಬಕ್ತಾವಾಂಗ್‌ನಿಂದ 100 ಕಿಲೋ ಮೀಟರ್ ದೂರದಲ್ಲಿ. ಕುಟುಂಬದ ಯಜಮಾನ ಜಿಯೋನಾನಿಗೆ 66ರ ವಯಸ್ಸು. ಆತನಿಗೆ 38 ಹೆಂಡತಿಯರು, 94 ಮಕ್ಕಳು.
'ಚುವಾನ್ ದಾಟ್ ರನ್' (ನೂತನ ಪೀಳಿಗೆಯ ಮನೆ) ಎಂದು ಹೆಸರಿಸಲಾಗಿರುವ ಆರ್‌ಸಿಸಿ ಮನೆಯಲ್ಲಿ ವಾಸವಾಗಿರುವ ಈ ಕುಟುಂಬ 'ಚಾನಾ' ಪಂಥಕ್ಕೆ ಸೇರಿದುದಾಗಿದೆ. ಜಿಯೋನಾನ 94 ಮಕ್ಕಳಲ್ಲಿ ಹಲವರಿಗೆ ಮದುವೆಯಾಗಿದೆ. ಮೊಮ್ಮಕ್ಕಳೂ ಇದ್ದಾರೆ. ಆದರೂ ಒಂದೇ ಮನೆಯಲ್ಲಿದ್ದಾರೆ.
ಈ ಕುಟುಂಬದ ಪಂಗಡವನ್ನು ಜಿಯೋನಾ ಕಾ ಪಾ ಅಥವಾ 'ಫಾದರ್' ಎಂದು ಕರೆಯಲಾಗುತ್ತದೆ. ಇದು 'ಕುಮ್ ಸಾಂಗ್ ರೋರೆಲ್' ಅಥವಾ ಬೈಬಲ್ ದಿವ್ಯದರ್ಶನದ 20ನೇ ಅಧ್ಯಾಯದಲ್ಲಿ ಹೇಳಿರುವಂತೆ ಕ್ರಿಸ್ತ ಒಂದು ಸಾವಿರ ವರ್ಷ ಭೂಮಿಯನ್ನು ಆಳುತ್ತಾನೆ ಎಂಬುದರಲ್ಲಿ ನಂಬಿಕೆಯಿಟ್ಟಿದೆ. ಅಲ್ಲದೆ ಶೀಘ್ರದಲ್ಲೇ ಕ್ರಿಸ್ತನ ಜತೆ ಜಗತ್ತನ್ನು ಆಳ್ವಿಕೆ ಮಾಡುವ ಭರವಸೆಯಿದೆ.
ತಮ್ಮ ಮಕ್ಕಳು ಈ ಕಟ್ಟಡದ ಬೇರೆ ಬೇರೆ ಕೊಠಡಿಗಳಲ್ಲಿ ವಾಸಿಸುತ್ತಿದ್ದರೂ, ಒಟ್ಟಿಗೆ ಅಡುಗೆ ಮಾಡುತ್ತೇವೆ. ನಮಗೆ ಮಾಂಸದಡುಗೆ ಬೇಕೆಂದರೆ ಸುಮಾರು 30ರಿಂದ 35 ಕೇಜಿ ಹಂದಿ ಮಾಂಸ ಬೇಕಾಗುತ್ತದೆ. ಒಂದು ಬಾರಿಯ ಊಟಕ್ಕೆ 50 ಕೇಜಿ ಅಕ್ಕಿ ಬೇಕು ಎಂದು ಜಿಯೋನಾ ಪತ್ನಿಯೊಬ್ಬಳು ತಿಳಿಸಿದ್ದಾಳೆ.
ಈ ಪಂಗಡವನ್ನು ಮುನ್ನಡೆಸುತ್ತಿದ್ದ ಚನಾ 1997ರ ಫೆಬ್ರವರಿ 27ರಂದು ಸಾವನ್ನಪ್ಪಿದ್ದ. ಇದೀಗ ಆತನ ಹಿರಿ ಮಗ ಜಿಯೋನಾ ಕುಟುಂಬವನ್ನು ನಡೆಸುತ್ತಿದ್ದಾನೆ.
ಮೂಲಗಳ ಪ್ರಕಾರ ಜಿಯೋನಾಗಿಂತ ಆತನ ತಂದೆ ಚನಾನಿಗೆ ಹೆಚ್ಚು ಪತ್ನಿಯರಿದ್ದರು. ಪ್ರಗತಿಪರ ನಂಬಿಕೆ ಹೊಂದಿದ್ದ ಚನಾನ ಹಿರಿಯ ಸಹೋದರ ಹಾಗೂ ಪಂಥದ ಸಂಸ್ಥಾಪಕ ಖುವಾಂಗ್ತುಹಾ ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ.