ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಡರ್ಸನ್ ಬಿಟ್ಟದ್ದು ನಾನಲ್ಲ; ಮೌನ ಮುರಿದ ಅರ್ಜುನ್ ಸಿಂಗ್ (Arjun Singh | Congress | Bhopal gas tragedy | Warren Anderson)
Bookmark and Share Feedback Print
 
ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಒ ವಾರೆನ್ ಆಂಡರ್ಸನ್ ಪರಾರಿಯಾಗುವಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ನನಗೆ ಯಾವುದೇ ಅಧಿಕಾರವಿರಲಿಲ್ಲ ಎಂದು ಹೇಳಿರುವ ಅವರು ಪರೋಕ್ಷವಾಗಿ ಕೇಂದ್ರ ಸರಕಾರದತ್ತ ಬೆಟ್ಟು ಮಾಡಿ ತೋರಿಸಿದ್ದಾರೆ.

ಭೋಪಾಲ್ ಅನಿಲ ದುರಂತ ಪ್ರಕರಣದ ತೀರ್ಪು ಹೊರ ಬಿದ್ದ ನಂತರ ಭಾರೀ ವಿವಾದವೆದ್ದಿದ್ದರೂ, ಅರ್ಜುನ್ ಸಿಂಗ್ ಮಾತಿಗೆ ಸಿಕ್ಕಿರಲಿಲ್ಲ. ಆದರೆ ಕೊನೆಗೂ ಇದೀಗ ಬಾಯ್ಬಿಟ್ಟಿದ್ದಾರೆ. ಅವರನ್ನು ಮಾತಿಗೆ ಎಳೆದಿರುವುದು 'ಹಿಂದೂಸ್ತಾನ್ ಟೈಮ್ಸ್' ದಿನಪತ್ರಿಕೆ.

ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಸದ್ಯಕ್ಕೆ ಇಷ್ಟೇ ಹೇಳಬಲ್ಲೆ. ಆಂಡರ್ಸನ್ ಪ್ರಕರಣದ ಕುರಿತು ನನ್ನ ಜೀವನ ಚರಿತ್ರೆಯಲ್ಲಿ ವಿವರವಾಗಿ ಬರೆಯುತ್ತೇನೆ ಎಂದಷ್ಟೇ ಸಿಂಗ್ ತಿಳಿಸಿದ್ದಾರೆ.

ಅಸ್ವಸ್ಥರಾದ ನಂತರ ಚಿಕಿತ್ಸೆ ಪಡೆಯುತ್ತಿರುವ 79ರ ಹರೆಯದ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ನೀಡಿರುವ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಿರಾಕರಿಸಿದೆ.

1984ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ದುರಂತದ ನಂತರ ಭಾರತಕ್ಕೆ ಬಂದಿದ್ದ ಕಂಪನಿ ಮುಖ್ಯಸ್ಥ ಆಂಡರ್ಸನ್ ನಿರ್ಗಮನಕ್ಕೆ ಅವಕಾಶ ನೀಡುವಂತೆ ಅರ್ಜುನ್ ಸಿಂಗ್ ಆದೇಶ ನೀಡಿದ್ದರು ಎಂದು ಹಲವು ಅಧಿಕಾರಿಗಳು ಈ ಹಿಂದೆಯೇ ಹೇಳಿದ್ದರು. ಅಲ್ಲದೆ ರಾಜೀವ್ ಗಾಂಧಿ ಸರಕಾರವು ಆಂಡರ್ಸನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ 'ಡೀಲ್' ಮಾಡಿಕೊಂಡಿತ್ತು ಎಂದೂ ಅಮೆರಿಕಾ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದರು.

ದುರಂತದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಪಾತ್ರ ಸ್ಪಷ್ಟವಾಗಿದೆ ಎಂದು ಬಿಜೆಪಿಯೂ ಆರೋಪಿಸಿಕೊಂಡು ಬಂದಿತ್ತು. ಹಾಗಾಗಿ ಪ್ರಸಕ್ತ ಅರ್ಜುನ್ ಸಿಂಗ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ