ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಮರಿ ಮೊಮ್ಮಗ, ಇಂದಿರಾ ಗಾಂಧಿ ಮೊಮ್ಮಗ, ರಾಜೀವ್ ಗಾಂಧಿ ಮಗ ಎಂಬುವುದರ ಹೊರತಾಗಿಯೂ ಭಾರತೀಯ ರಾಜಕಾರಣದಲ್ಲಿ ಹೊಸ ಅಲೆಯನ್ನು ಎಬ್ಬಿಸುವ ಛಾತಿಯುಳ್ಳ ಯುವ ರಾಜಕಾರಣಿಯೆಂದು ಹೆಸರು ಪಡೆದಿರುವ ರಾಹುಲ್ ಗಾಂಧಿಗೆ ಇಂದು 40ನೇ ಹುಟ್ಟುಹಬ್ಬ.
ತನ್ನದ್ದು ಕುಟುಂಬ ರಾಜಕಾರಣ ಎಂಬುದನ್ನು ತಳ್ಳಿ ಹಾಕದೆ, ಅದನ್ನು ಒಪ್ಪಿಕೊಳ್ಳುತ್ತಲೇ ಬದಲಾವಣೆಯನ್ನು ಬಯಸುವ ವ್ಯಕ್ತಿ ತಾನೆಂದು ಹೋದಲ್ಲಿ ತೋರಿಸಿಕೊಂಡಿರುವ ರಾಹುಲ್ ಗಾಂಧಿ ಕಾಂಗ್ರೆಸ್‌ನ ಮುಂದಿನ ಉಜ್ವಲ ನಾಯಕ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ಪ್ರಧಾನ ಮಂತ್ರಿಯೆಂದೇ ಅವರನ್ನು ಬಿಂಬಿಸುತ್ತಾ ಬರಲಾಗುತ್ತಿದೆ.
ಇಂತಹ ಸುರಸುಂದರಾಂಗ ಗಾಂಧಿ ನಲ್ವತ್ತಾದರೂ ಇನ್ನೂ ಮದುವೆಯಾಗಿಲ್ಲ ಯಾಕೆ ಎನ್ನುವ ಪ್ರಶ್ನೆ ಹಲವರದ್ದು. ಮೋತಿಲಾಲ್ ನೆಹರೂ ನಂತರದ ಐದನೇ ಪೀಳಿಗೆ ರಾಹುಲ್ ಆರನೇ ಪೀಳಿಗೆಯನ್ನು ಅಸ್ತಿತ್ವಕ್ಕೆ ತರುವುದು ಯಾವಾಗ? ಇಂತಹ ಪ್ರಶ್ನೆಗಳಿಗೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ದನಿಗೂಡಿಸುತ್ತಾರೆ. ಆದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಾತ್ರ ಯಾವುದೇ ಉತ್ತರ ನೀಡುತ್ತಿಲ್ಲ.
'ನನಗೆ ಮದುವೆಯಾಗಲು ಸಮಯವಿಲ್ಲ. ಖಂಡಿತಾ ಅಂತಹ ಸಮಯ ಬಂದಾಗ ನಿಮಗೆ ಹೇಳುತ್ತೇನೆ..' - ಇದು ಈ ಸಂಬಂಧ ಕೇಳಿ ಬಂದ ಪ್ರಶ್ನೆಯೊಂದಕ್ಕೆ ರಾಹುಲ್ ಗಾಂಧಿ ಉತ್ತರಿಸಿದ್ದು. ಯಾವತ್ತೂ ಮದುವೆ ಪ್ರಸ್ತಾಪಗಳನ್ನು ಯಾರಾದರೂ ಮಾಡಿದರೆಂದರೆ ಇಂತಹುದೇ ಹಾರಿಕೆಯ ಉತ್ತರ ಅವರಿಂದ ಬರುತ್ತಿದೆ.
ಅಂದ ಹಾಗೆ ಈ ನೆಹರೂ ಕುಟುಂಬಕ್ಕೆ ಪ್ರೇಮ ವಿವಾಹದ ದೊಡ್ಡ ಇತಿಹಾಸವೇ ಇದೆ. ಕಾಶ್ಮೀರಿ ಪಂಡಿತ ಮೋತಿಲಾಲ್ ನೆಹರೂ ತನ್ನ ಮೊದಲ ಪತ್ನಿಯ ಮರಣದ ನಂತರ ಸ್ವರೂಪಾ ರಾಣಿ ಎಂಬ ಕಾಶ್ಮೀರಿ ಬ್ರಾಹ್ಮಣ ಹುಡುಗಿಯನ್ನು ಎರಡನೇ ಮದುವೆಯಾಗಿದ್ದರು. ಅವರ ಮಕ್ಕಳೇ ಜವಾಹರ್‌ಲಾಲ್ ನೆಹರೂ, ವಿಜಯ ಲಕ್ಷ್ಮಿ ಪಂಡಿತ್ ಮತ್ತು ಕೃಷ್ಣ.
ನೆಹರೂ ಮದುವೆಯಾದದ್ದು ಕಮಲಾ ಕೌಲ್ ಎಂಬ 17ರ ಕಾಶ್ಮೀರಿ ಬ್ರಾಹ್ಮಣ ತರುಣಿಯನ್ನು. ಇವರಿಗೆ ಹುಟ್ಟಿದ ಮಗುವೇ ಇಂದಿರಾ ಪ್ರಿಯದರ್ಶಿನಿ. ವೈಸರಾಯ್ ಮೌಂಟ್‌ಬ್ಯಾಟನ್ ಪತ್ನಿ ಎಡ್ವಿನಾ ಜತೆ ನೆಹರೂ ಹೊಂದಿದ್ದ ಅಕ್ರಮ ಸಂಬಂಧವೂ ಜನಜನಿತ. ಬ್ರಿಟೀಷ್ ಆಡಳಿತದ ಕೊನೆಯ ಹಂತದಲ್ಲಿ ಇವರ ನಡುವೆ ಸಂಬಂಧವಿತ್ತು ಎಂದು ಹೇಳಲಾಗುತ್ತಿದೆ.
ಇಂದಿರಾ ಪ್ರಿಯದರ್ಶಿನಿಯಾಗಿಯೇ ಇದ್ದ ನೆಹರೂ ಪುತ್ರಿ ಫಿರೋಜ್ ಗಾಂಧಿ (Feroze Gandhi) ಎಂಬ ಪಾರ್ಸಿಯ ಜತೆ ಹೊಂದಿದ್ದ ಪ್ರೇಮ ಸಂಬಂಧ ನೆಹರೂ ಕುಟುಂಬದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಅವರನ್ನೇ ಮದುವೆಯಾಗುವ ಮೂಲಕ ಇಂದಿರಾ ಪ್ರಿಯದರ್ಶಿನಿ ಎಂಬ ಹೆಸರಿನ ಬದಲು 'ಇಂದಿರಾ ಗಾಂಧಿ'ಯಾದರು.
ಇವರ ಪುತ್ರ ರಾಜೀವ್ ಗಾಂಧಿ ಪೈಲಟ್ ಆಗಿದ್ದವರು. ಇಟಲಿ ಮೂಲದ ಆಂಟೋನಿಯಾ ಮಿಯಾನೋ (ಸೋನಿಯಾ) ಎಂಬ ಹುಡುಗಿಯ ಜತೆಗಿನ ಸಲ್ಲಾಪ ಮದುವೆಯಲ್ಲಿ ವಿಲೀನಗೊಂಡಿತ್ತು. ಇದೇ ರೀತಿ ಇಂದಿರಾ ಕಿರಿಯ ಪುತ್ರ ಸಂಜಯ್ ಗಾಂಧಿ ಕೂಡ ಮಾಡೆಲ್ ಆಗಿದ್ದ ಮೇನಕಾರನ್ನು ಮದುವೆಯಾಗಿದ್ದರು. ಪುತ್ರರಿಬ್ಬರ ಮದುವೆಗಳು ಕೂಡ ಇಂದಿರಾ ಗಾಂಧಿಯ ಅಪೇಕ್ಷೆಯಂತೆ ನಡೆದಿರಲಿಲ್ಲ.
ಇದು ರಾಜೀವ್-ಸೋನಿಯಾ ಪುತ್ರಿ ಪ್ರಿಯಾಂಕಾ ಮದುವೆಯಲ್ಲೂ ಮುಂದುವರಿಯಿತು. ಮೊರಾದಾಬಾದ್‌ನ ರಫ್ತು ಉದ್ಯಮಿಯ ಪುತ್ರ ರಾಬರ್ಟ್ ವಾದ್ರಾರನ್ನು ಪ್ರೇಮಿಸಿದ್ದ ಪ್ರಿಯಾಂಕಾ ಗಾಂಧಿ ಮದುವೆಯಾದದ್ದು ಷರತ್ತಿನ ಮೇಲೆ. ವಾದ್ರಾ ತನ್ನ ಕುಟುಂಬದ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕೆಂಬುದು ನಿಬಂಧನೆಯಾಗಿತ್ತು. ಅದರಂತೆ ಕೊನೆಗೂ ಮದುವೆ ನಡೆದಿತ್ತು. ದುರದೃಷ್ಟವೆಂದರೆ ವಾದ್ರಾ ತಂದೆ, ಸಹೋದರ ಮತ್ತು ಸಹೋದರಿ ನಂತರದ ದಿನಗಳಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು.
ಇದೀಗ ಖಾಲಿ ಉಳಿದಿರುವ ಗಾಂಧಿಗಳು ಇಬ್ಬರೇ. ಒಂದು ರಾಹುಲ್ ಗಾಂಧಿ, ಮತ್ತೊಂದು ವರುಣ್ ಗಾಂಧಿ. ಸಂಜಯ್ ಪುತ್ರನಿಗೆ ಈಗ ಕೇವಲ ಮೂವತ್ತು ವರ್ಷವಷ್ಟೇ ತುಂಬಿದೆ. ಹಾಗಾಗಿ ಸರದಿಯಲ್ಲಿರುವವರು 40 ಗಾಂಧಿ. ಇವರೂ ವಿದೇಶಿ ಮಹಿಳೆಯನ್ನು ಮದುವೆಯಾಗುತ್ತಾರೋ ಅಥವಾ ಸ್ವದೇಶಿಯನ್ನು ವರಿಸುತ್ತಾರೋ ಎಂಬ ಕುತೂಹಲಗಳಿವೆ. ಜತೆಗೆ ಮದುವೆ ವಿವಾದ ರಾಹುಲ್ ವಿವಾಹವನ್ನೂ ಬಿಡಲಾರದು ಎಂಬುದು ಇತಿಹಾಸವನ್ನು ನೋಡಿದಾಗ ಖಚಿತವಾಗುತ್ತಿದೆ.
ರಾಹುಲ್ ಗಾಂಧಿ ಕೂಡ ಪ್ರೇಮ ಸಂಬಂಧಗಳಿಂದ ಹೊರತಲ್ಲ. ಸ್ಪಾನಿಷ್ ಹುಡುಗಿ ವೆರೊನಿಕಾ ಎಂಬಾಕೆಯನ್ನು ತಾನು ಪ್ರೀತಿಸುತ್ತಿದ್ದೇನೆ ಎಂಬುದನ್ನು ಕೆಲವು ವರ್ಷಗಳ ಹಿಂದೆ ಸ್ವತಃ ಅವರೇ ಒಪ್ಪಿಕೊಂಡಿದ್ದರು. ಅದೇ ಕಾರಣದಿಂದ ಅವರು ಕಾಂಗ್ರೆಸ್ ರಾಜಕೀಯದಿಂದ ದೂರ ಉಳಿದಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಈ ಸಂಬಂಧ ಮುರಿದು ಹೋಗಿದೆ ಎಂದು ಹೇಳಲಾಗುತ್ತಿದೆ.
ಸೋನಿಯಾ ಗಾಂಧಿ ಭಾರತದ ಪ್ರಧಾನಿಯಾಗಲೆಂದು ಹೊರಟಿದ್ದಾಗ ವಿದೇಶಿ ಮಹಿಳೆ ಎಂಬುದೊಂದು ಕಳಂಕ ಕಾಂಗ್ರೆಸ್‌ಗೆ ಅಂಟಿಕೊಂಡಿತ್ತು. ಮತ್ತೆ ಅದೇ ರೀತಿಯ ಸಮಸ್ಯೆಗಳು ಎದುರಾಗುವುದು ಬೇಡವೆಂಬುದು ಗಾಂಧಿ ಕುಟುಂಬದ ಯೋಚನೆ. ಅದಕ್ಕಾಗಿ ಭಾರತೀಯ ತರುಣಿಯನ್ನೇ ರಾಹುಲ್ ಗಾಂಧಿಗೆ ಮದುವೆ ಮಾಡಿಸುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತಿದೆ.
ಅಂತಹ ನಿರೀಕ್ಷೆಗಳು ರಾಹುಲ್ ಗಾಂಧಿಯ ಮುಂದಿನ ಹುಟ್ಟುಹಬ್ಬದಲ್ಲಿ ನಿಜವಾಗಬಹುದೇ?