ಪಾಕಿಸ್ತಾನದ ಮುಸ್ಲಿಂ ಮಾಡೆಲ್ ಒಬ್ಬಳ ಪ್ರೇಮಪಾಶದಲ್ಲಿ ಬಿದ್ದಿದ್ದ ಉತ್ತರ ಪ್ರದೇಶದ ಹಿಂದೂ ಯುವಕನೋರ್ವ ಆಕೆಯನ್ನು ಭೇಟಿ ಮಾಡಲೆಂದು ಅಕ್ರಮವಾಗಿ ಗಡಿ ದಾಟಲು ಯತ್ನಿಸಿ ಕೊನೆಗೆ ಜೈಲು ಸೇರಿದ್ದಾನೆ.
ದೀಪಕ್ ಚಂದರ್ ಎಂಬ 24ರ ಯುವಕನೇ ಹೀಗೆ ಭಾರತೀಯ ವಲಸೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು ಜೈಲು ಸೇರಿರುವುದು. ಪಾಸ್‌ಪೋರ್ಟ್ ಮತ್ತು ವೀಸಾ ಹೊಂದಿಲ್ಲದಿದ್ದರೂ ಅಮೃತಸರದ ಅತ್ತಾರಿ ರೈಲು ನಿಲ್ದಾಣದಲ್ಲಿ ಸಮಜೋತಾ ಎಕ್ಸ್‌ಪ್ರೆಸ್ ಮೂಲಕ ಪಾಕಿಸ್ತಾನಕ್ಕೆ ಹೋಗಲು ಯತ್ನಿಸಿದ್ದ.
ತಾನು ಪಾಕಿಸ್ತಾನಿ ಮಾಡೆಲ್ ನಯನಾ ಚೌಧರಿಯನ್ನು ಪ್ರೇಮಿಸುತ್ತಿರುವುದಾಗಿ ಸ್ನಾತಕೋತ್ತರ ಪದವಿ ಮುಗಿಸಿರುವ ಯುವಕ ದೀಪಕ್ ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾನೆ.
ದೀಪಕ್ ಹಲವು ಸಮಯಗಳಿಂದ ಮಾಡೆಲ್, ಫ್ಯಾಷನ್ ಡಿಸೈನರ್ ನಯನಾ ಜತೆ ಇಂಟರ್ನೆಟ್ ಚಾಟಿಂಗ್ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಸವಾಲು ಹಾಕಿದ್ದ ಆಕೆ, ನಿನಗೆ ನನ್ನ ಮೇಲೆ ಪ್ರೀತಿ ಇರುವುದು ನಿಜವೇ ಆಗಿದ್ದರೆ ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಬಾ ಎಂದಿದ್ದಳು. ಅದರಂತೆ ನಿಯಮ ಉಲ್ಲಂಘಿಸಿ ಪ್ರಯಾಣಿಸಲು ಯತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದಿರುವ ದೀಪಕ್ ಇಲ್ಲಿನ ಸೆಂಟ್ರಲ್ ಜೈಲು ಸೇರಿದ್ದಾನೆ.
ಉತ್ತರ ಪ್ರದೇಶದ ಗೋರಖ್‌ಪುರದ ಯುವಕನಾಗಿರುವ ದೀಪಕ್, ಲಾಹೋರ್‌ಗೆ ಪಯಣಿಸಲು ಬಯಸಿದ್ದ. ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಬಿಡುಗಡೆ ಮಾಡಿದೆ.
ಇಷ್ಟೆಲ್ಲ ಆವಾಂತರಗಳು ನಡೆದಿದ್ದರೂ ದೀಪಕ್‌ಗೆ ಯಾವುದೇ ಪಶ್ಚಾತಾಪವಿಲ್ಲ. ಇದೆಲ್ಲ ಮಾಡಿರುವುದು ನನ್ನ ಪ್ರೀತಿಗಾಗಿ ಎಂದು ಆತ ಹೇಳಿಕೊಂಡಿದ್ದಾನೆ. ಏನೇ ಆದರೂ ಪಾಕಿಸ್ತಾನಕ್ಕೆ ಹೋಗಿಯೇ ಸಿದ್ಧ, ಪ್ರಿಯತಮೆ ನಯನಾಳನ್ನು ಭೇಟಿ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.