ಮೊಬೈಲ್ ಕಳ್ಳತನ ಮಾಡಿದ ಆರೋಪ ಹೊರಿಸಿದ ಗುಂಪೊಂದು ದಲಿತ ಯುವಕನೊಬ್ಬನಿಗೆ ಥಳಿಸಿದ್ದಲ್ಲದೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಹರ್ಯಾಣದಿಂದ ವರದಿಯಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಗಂಭೀರ ರೂಪಕ್ಕೆ ಹೋಗಿದ್ದ ಹೊತ್ತಿನಲ್ಲಿ ಯುವಕನನ್ನು ಇತರರು ರಕ್ಷಿಸಿದ್ದಾರೆ. ಇಲ್ಲಿನ ಜಾಜರ್ ಜಿಲ್ಲೆಯ ಗವಾಲಿಸನ್ ಗ್ರಾಮದ ಸಂದೀಪ್ ಕುಮಾರ್ ಎಂಬಾತನೇ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಯುವಕ.
ಇಲ್ಲಿನ ಕಾಕ್ರಾ ವಾಲಾ ಎಂಬಲ್ಲಿ ಸ್ಪರ್ಧೆಯೊಂದು ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಮೂತ್ರ ಮಾಡಲೆಂದು ಸಂದೀಪ್ ಹೊರಗೆ ಬಂದಿದ್ದ. ಆತನನ್ನು ಹಿಂಬಾಲಿಸಿದ ದೇಬಿ ಸಿಂಗ್ ಎಂಬಾತ, ಮೊಬೈಲ್ ಕಳ್ಳತನದ ಆರೋಪ ಹೊರಿಸಿದ. ಅದನ್ನು ಸಂದೀಪ್ ಒಪ್ಪಿಕೊಳ್ಳದೇ ಇದ್ದಾಗ ಸಿಂಗ್ ದೂಷಿಸಲು ಆರಂಭಿಸಿದ.
ಆ ಹೊತ್ತಿಗೆ ಸಿಂಗ್ ಬೆಂಬಲಕ್ಕೆ ಇತರ ನಾಲ್ವರು ಯುವಕರು ಬಂದಿದ್ದರು. ಒಟ್ಟು ಸೇರಿದ ಐವರು ಸಂದೀಪ್‌ಗೆ ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದರು. ಅಲ್ಲೇ ಇದ್ದ ಕ್ಯಾನ್‌ನಲ್ಲಿನ ಪೆಟ್ರೋಲನ್ನು ಯುವಕನ ಮೇಲೆ ಸುರಿದು ಬೆಂಕಿ ಹಚ್ಚಿಯೇ ಬಿಟ್ಟರು.
ಅಷ್ಟು ಹೊತ್ತಿಗೆ ಸಂದೀಪ್ ಜೋರಾಗಿ ಬೊಬ್ಬೆ ಹೊಡೆಯಲಾರಂಭಿಸಿದ್ದ. ರಕ್ಷಣೆಗೆ ಅಲ್ಲಿನ ಕೆಲವರು ಬರುತ್ತಿದ್ದಂತೆ ಸಿಂಗ್ ಮತ್ತು ಆತನ ಗೆಳೆಯರು ಪರಾರಿಯಾಗಿದ್ದಾರೆ. ಬಲಿಪಶುವನ್ನು ರೋಹ್ಟಕ್‌ನಲ್ಲಿ ಪಿಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ ಇಲ್ಲಿ ಜಾತಿ ರಾಜಕೀಯ ಕೆಲಸ ಮಾಡಿಲ್ಲ. ಆರೋಪ-ಪ್ರತ್ಯಾರೋಪಗಳೇ ತಾರಕಕ್ಕೇರಿ ಘಟನೆ ನಡೆದಿದೆ. ಆದರೂ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದೇವೆ. ಎಲ್ಲಾ ಸಾಧ್ಯತೆಗಳನ್ನು ಪರಿಶೀಲನೆ ನಡೆಸುತ್ತೇವೆ ಎಎಂದು ತಿಳಿಸಿದ್ದಾರೆ.