ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ ಮತ್ತೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೋಮವಾರ ಮುಂಜಾನೆ ಪಾಕ್ ಪಡೆಗಳು ಯದ್ವಾತದ್ವಾ ಗುಂಡು ಹಾರಿಸಿದ್ದು, ಭಾರತದ ಗಡಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ.
ಗಡಿಯುದ್ದಕ್ಕೂ ಸುಧಾರಿತ ಸ್ಫೋಟಕ ವಸ್ತುಗಳ ಸ್ಫೋಟವೂ ನಡೆದಿದೆ ಎಂದು ವರದಿಗಳು ಹೇಳಿವೆ.
ಜಮ್ಮುವಿನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಆರ್.ಎಸ್.ಪುರ ಉಪ ವಲಯದಲ್ಲಿ ಬರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಆಚೆಗಿರುವ ಪಾಕಿಸ್ತಾನದ ಸುರಾಗ್ಪುರ್ ಪೋಸ್ಟ್‌ನಲ್ಲಿನ ಅಬ್ದುಲ್ಲಿಯಾ ಬಾರ್ಡರ್ ಔಟ್‌ಪೋಸ್ಟ್‌ನಿಂದ ಸರಹದ್ದು ಉಲ್ಲಂಘಿಸಿ ಇಂದು ಮುಂಜಾನೆ ನಾಲ್ಕು ಗಂಟೆಗೆ ಹೊತ್ತಿಗೆ ಗುಂಡು ಹಾರಾಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಗಡಿ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಬಿಎಸ್ಎಫ್ ಜವಾನರು ಕಾರ್ಯಪ್ರವೃತ್ತರಾಗಿದ್ದು, ಪ್ರತಿದಾಳಿ ನಡೆಸಿದ್ದಾರೆ. ಆಗ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ. ಇದು ಸುಮಾರು ಒಂದೂವರೆಗ ಗಂಟೆಗಳ ಕಾಲ ನಡೆಯಿತು. ಸ್ವಲ್ಪ ಹೊತ್ತು ಸ್ಥಗಿತಗೊಂಡ ಬಳಿಕ ಮತ್ತೆ 6.15ರ ಹೊತ್ತಿಗೆ ಆರಂಭವಾಯಿತು. ಬಳಿಕ ಮತ್ತೆ ಸ್ಥಗಿತಗೊಂಡಿದೆ.
ಗಡಿ ಭಾಗದಲ್ಲಿ ಸುಧಾರಿತ ಸ್ಫೋಟಕವನ್ನೂ ಬಳಸಲಾಗಿದೆ. ಗುಂಡಿನ ಚಕಮಕಿ ಅಥವಾ ಸ್ಫೋಟದಿಂದ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ. ಭಯೋತ್ಪಾದಕರನ್ನು ಗಡಿಯೊಳಕ್ಕೆ ನುಗ್ಗಿಸುವ ಸಲುವಾಗಿ ಈ ಸ್ಫೋಟ ನಡೆಸಲಾಗಿತ್ತೇ ಎಂಬುದರ ಕುರಿತು ತಕ್ಷಣ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಈ ಪ್ರದೇಶದಲ್ಲಿ ಒಳನುಸುಳುವಿಕೆ ನಡೆದಿರುವ ಸಾಧ್ಯತೆಗಳನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಹುಡುಕಾಟ ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಕಾಯಲಾಗುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ನಿನ್ನೆಯಷ್ಟೇ ನಿಯಂತ್ರಣಾ ರೇಖೆಯಲ್ಲಿನ ಏಳು ವರ್ಷಗಳ ಕದನ ವಿರಾಮವನ್ನು ಉಲ್ಲಂಘಿಸಿದ್ದ ಪಾಕಿಸ್ತಾನಿ ಪಡೆಗಳು ಜಮ್ಮು-ಕಾಶ್ಮೀರದ ಮಚಿಲ್ ವಲಯದ ಮೇಲೆ ದಾಳಿ ನಡೆಸಿ ಇಬ್ಬರು ದ್ವಾರಪಾಲಕರನ್ನು ಕೊಂದು ಹಾಕಿದ್ದರು. ಘಟನೆಯಲ್ಲಿ ಇಬ್ಬರು ಜವಾನರಿಗೂ ಗಾಯಗಳಾಗಿದ್ದವು.