ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರುಣ್ ಗಾಂಧಿ, ಮೋದಿ ಚುನಾವಣಾ ಪ್ರಚಾರಕ್ಕೆ ಬೇಡ..! (Varun Gandhi | Narendra Modi | Nitish Kumar | BJP)
Bookmark and Share Feedback Print
 
ಬಿಜೆಪಿಯ ಎರಡು ಫೈರ್ ಬ್ರಾಂಡ್‌ಗಳು ಚುನಾವಣಾ ಪ್ರಚಾರಕ್ಕೆ ಬರಬಾರದು. ಹೌದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಫಿಲಿಭಿತ್ ಸಂಸದ ವರುಣ್ ಗಾಂಧಿಯನ್ನು ದೂರ ಇಡಬೇಕೆಂದು ಬೇಡಿಕೆ ಮುಂದಿಟ್ಟಿರುವುದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್.

ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಮುಂದುವರಿಯಬೇಕೆನ್ನುವ ಆಸೆ ಬಿಜೆಪಿಯವರಿಗೆ ಇದ್ದಲ್ಲಿ ಈ ಎರಡು ಕೆಲಸಗಳನ್ನು ಮೊದಲು ಮಾಡಬೇಕು. ಹಾಗಾದಲ್ಲಿ ಮಾತ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಜೆಡಿಯು ಮುಖ್ಯಸ್ಥ ಸ್ಪಷ್ಟಪಡಿಸಿದ್ದಾರೆ.

ನಮ್ಮ ಸರಕಾರದ ನಿರ್ವಹಣೆ ಆಧಾರದಲ್ಲಿ ಬಿಹಾರ ಚುನಾವಣೆ ನಡೆಯಬೇಕು. ಇದು ರಾಷ್ಟ್ರೀಯ ಚುನಾವಣೆಯಲ್ಲ, ವಿಧಾನಸಭಾ ಚುನಾವಣೆ. ತಮ್ಮ ನಿಲುವುಗಳನ್ನು ಜನರ ಮುಂದೆ ಪ್ರಚುರಪಡಿಸಲು ರಾಜ್ಯದ ಬಿಜೆಪಿ ನಾಯಕರೇ ಸಮರ್ಥರಿದ್ದಾರೆ ಎಂದು ನವದೆಹಲಿಯಲ್ಲಿ ನಿತೀಶ್ ಕುಮಾರ್ ಸ್ಪಷ್ಟಪಡಿಸುವುದರೊಂದಿಗೆ ಎನ್‌ಡಿಎ ಮೈತ್ರಿ ತನಗೆ ಬೇಕಾಗಿಲ್ಲ ಎಂಬ ಪರೋಕ್ಷ ಸಂದೇಶವನ್ನು ಜೆಡಿಯು ರವಾನಿಸಿದೆ.

ಮೋದಿ ಮತ್ತು ವರುಣ್ ಗಾಂಧಿಯನ್ನು 2009ರ ಲೋಕಸಭಾ ಚುನಾವಣೆಯಲ್ಲೂ ನೀವು ಬಿಹಾರದಲ್ಲಿ ಪ್ರಚಾರ ಮಾಡಲು ಅವಕಾಶ ನೀಡಿರಲಿಲ್ಲ. ಇದನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.

ಇದಕ್ಕೆ ಬೆಂಬಲ ನೀಡುವ ಹೇಳಿಕೆ ಜೆಡಿಯು ಮೂಲಗಳಿಂದಲೂ ಬಂದಿದೆ. ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೋ ಇಲ್ಲವೋ, ಆದರೆ ಈ ವಿಚಾರದಲ್ಲಿ (ವರುಣ್ ಗಾಂಧಿ ಮತ್ತು ಮೋದಿಯನ್ನು ಪ್ರಚಾರದಿಂದ ದೂರ ಇಡುವುದು) ಅವರು ಯಾವುದೇ ರಾಜಿಗೆ ಸಿದ್ಧರಿಲ್ಲ ಎಂದು ಜೆಡಿಯು ತಿಳಿಸಿದೆ.

ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ವರುಣ್ ಗಾಂಧಿ ಮತ್ತು ನರೇಂದ್ರ ಮೋದಿಯನ್ನು ಕುಗ್ಗಿಸಲು ಯತ್ನಿಸುತ್ತಾ, ಮುಸ್ಲಿಮರ ಒಲವು ಗಳಿಸಿಕೊಳ್ಳಲು ಯತ್ನಿಸುತ್ತಿರುವ ನಿತೀಶ್ ಕುಮಾರ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎನ್ನುವುದು ಬಿಜೆಪಿ ಮೂಲಗಳ ಅಭಿಪ್ರಾಯ. ಇತ್ತೀಚಿನ ಬಿಹಾರದಲ್ಲಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಮೈತ್ರಿ ಕುರಿತು ಮರು ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ