ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ವಿರುದ್ಧ ಸಾಕ್ಷ್ಯ; ಬಾಲಕಿಗೆ ಶಾಲಾ ಪ್ರವೇಶ ನಕಾರ (Mumbai terror attack | Devika Rotwan | Ajmal Kasab | India)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ವಿರುದ್ಧ ಸಾಕ್ಷ್ಯ ಹೇಳಿದ್ದ ಬಾಲಕಿಗೆ ಶಾಲಾ ಪ್ರವೇಶ ನಿರಾಕರಿಸಲಾಗಿದೆ. ಇದು ಪಾಕಿಸ್ತಾನದಲ್ಲಿ ನಡೆದಿರುವ ಘಟನೆಯಲ್ಲ, ನಮ್ಮ ಭಾರತದಲ್ಲೇ, ಅದರಲ್ಲೂ ಮುಂಬೈಯಲ್ಲಿ.

2008 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿ ನೂರಾರು ಅಮಾಯಕರನ್ನು ಹತೈಗೈದಿದ್ದ ಪಾತಕಿಗಳಲ್ಲಿ ಬದುಕುಳಿದಿದ್ದ ಕಸಬ್‌ನನ್ನು ನಾನು ನೋಡಿದ್ದೆ ಎಂದು ಹೇಳಿದ್ದ 11ರ ಹರೆಯದ ಬಾಲಕಿ ಅನುಭವಿಸುತ್ತಿರುವ ಸಂಕಷ್ಟವಿದು. ನಿನ್ನನ್ನು ಶಾಲೆಗೆ ಸೇರಿಸಿಕೊಂಡರೆ ನಮ್ಮ ಶಾಲೆ ಭಯೋತ್ಪಾದಕರ ದಾಳಿಯ ಗುರಿಯಾಗಬಹುದು ಎನ್ನುವುದು ಶಾಲೆ ನೀಡಿರುವ ಕಾರಣ.

ನನ್ನ ಮಗಳು ದೇವಿಕಾ ರೋತ್ವಾನ್‌ಳಿಗೆ ಬಾಂದ್ರಾದಲ್ಲಿನ 'ನ್ಯೂ ಇಂಗ್ಲೀಷ್ ಹೈಸ್ಕೂಲ್'ನಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ ನನ್ನ ಮಗಳು ಉಗ್ರರ ವಿರುದ್ಧ ಸಾಕ್ಷ್ಯ ಹೇಳಿರುವುದರಿಂದ ಶಾಲೆಗೆ ತೊಂದರೆಯಾಗಬಹುದು ಎಂಬ ಕಾರಣವನ್ನು ಆಡಳಿತ ಮಂಡಳಿ ನೀಡಿದೆ ಎಂದು ಬಾಲಕಿಯ ತಂದೆ, ಉದ್ಯಮಿ ನಟವರಲಾಲ್ ರೋತ್ವಾನ್ ಪತ್ರಕರ್ತರಿಗೆ ವಿವರಿಸಿದ್ದಾರೆ.

ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ (ಸಿಎಸ್‌ಟಿ) ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಈ ಹೆಣ್ಮಗಳು ದೇವಿಕಾ ಕೂಡ ತೀವ್ರವಾಗಿ ಗಾಯಗೊಂಡಿದ್ದಳು. ಇದರಿಂದ ಬಹುತೇಕ ಅಂಗವಿಕಲೆಯಾಗಿದ್ದಾಳೆ. ನಂತರ ನ್ಯಾಯಾಲಯದಲ್ಲಿ ಈ ಕುರಿತು ಸಾಕ್ಷ್ಯ ಹೇಳಿದ್ದ ಬಾಲಕಿ, ಸಿಎಸ್‌ಟಿಯಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಇದೇ ಅಜ್ಮಲ್ ಕಸಬ್ ಎಂದು ಗುರುತಿಸಿದ್ದಳು.

ಆರಂಭದಲ್ಲಿ ನಿಮ್ಮ ಮಗಳಿಗೆ ಐದನೇ ತರಗತಿಗೆ ನಾವು ಪ್ರವೇಶ ನೀಡುತ್ತೇವೆ ಎಂದಿದ್ದರು. ಆದರೆ ನಂತರ ತಮ್ಮ ಹೇಳಿಕೆ ಬದಲಾಯಿಸಿದರು. ಆಕೆ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದಳು ಮತ್ತು ಆಕೆಗೆ ಶಾಲೆಯಲ್ಲಿ ಪ್ರವೇಶ ನೀಡಬೇಕು ಎಂಬ ಸರಕಾರದ ಶಿಫಾರಸು ಪತ್ರವನ್ನು ಪ್ರವೇಶ ಪತ್ರದ ಜತೆ ನೀಡಬೇಕು ಎಂದು ಬೇಡಿಕೆ ಮುಂದಿಟ್ಟರು ಎಂದು ಬಾಲಕಿಯ ತಂದೆ ಅಸಹಾಯಕರಾಗಿ ಹೇಳಿಕೊಂಡಿದ್ದಾರೆ.

ನಾವು ಸರಕಾರದಿಂದ ಶಿಫಾರಸು ಪತ್ರವನ್ನು ಪಡೆಯಲು ಯತ್ನಿಸುತ್ತಿದ್ದೇವೆ. ಖಂಡಿತಾ ಅದನ್ನು ನೀಡುತ್ತೇವೆ. ಮಗಳಿಗೆ ಪ್ರವೇಶಾವಕಾಶ ನೀಡಿ ಎಂದು ಶಾಲೆಯಲ್ಲಿ ಕೇಳಿಕೊಂಡರೂ, ಅವರು ಭದ್ರತಾ ಕಳವಳಗಳನ್ನು ಮುಂದಿಟ್ಟು ಪ್ರವೇಶ ನೀಡಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎಂದರು.

ಕಾರಣ ಅದಲ್ಲ ಎನ್ನುತ್ತಿದೆ ಶಾಲೆ...
ಬಾಲಕಿಯ ತಂದೆ ಮಾಡುತ್ತಿರುವ ಆರೋಪವನ್ನು ಶಾಲಾ ಆಡಳಿತ ತಳ್ಳಿ ಹಾಕುತ್ತಿದ್ದು, ಪ್ರಬಲ ಕಾರಣಗಳಿಂದಾಗಿ ನಾವು ಪ್ರವೇಶ ನಿರಾಕರಿಸಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.

2008ರ ಮುಂಬೈ ದಾಳಿ ಪ್ರಕರಣದ ಸಾಕ್ಷಿ ಬಾಲಕಿ ಎಂಬ ಕಾರಣಕ್ಕೆ ನಾವು ದೇವಿಕಾಳಿಗೆ ಪ್ರವೇಶ ನಿರಾಕರಿಸಿಲ್ಲ. ಆಕೆ ಇಂಗ್ಲೀಷ್ ಭಾಷೆಯಲ್ಲಿ ಅತ್ಯುತ್ತಮ ಹಿಡಿತ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದಿದೆ.

ದೇವಿಕಾಳಿಗೆ ಇಂಗ್ಲೀಷ್ ಗೊತ್ತಿಲ್ಲ. ಇದುವರೆಗೆ ಅವಳು ಮನೆಯಲ್ಲಿಯೇ ಓದಿದವಳು. ಆಕೆಗೆ ಇಂಗ್ಲೀಷ್ ಗೊತ್ತಿಲ್ಲವೆಂಬುದು ಪ್ರವೇಶ ಅರ್ಜಿ ಹಿಡಿದು ಶಾಲೆಗೆ ಬಂದಾಗಲೇ ತಿಳಿದದ್ದು. ಆಕೆಗೆ ಇಂಗ್ಲೀಷ್ ಭಾಷೆಯ ಜ್ಞಾನವೇ ಇಲ್ಲ ಎಂದು ಈ ಶಾಲೆಯನ್ನು ನಡೆಸುತ್ತಿರುವ 'ಇಂಡಿಯನ್ ಎಜುಕೇಷನ್ ಸೊಸೈಟಿ' ಗೌರವ ಕಾರ್ಯದರ್ಶಿ ಅಮೂಲ್ ಧಾಂದೆರೆ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ