ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯುತ್ತಮ ಸೇವೆಗಾಗಿ ಮೋದಿ ಸರಕಾರಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ (UNPSA | Narendra Modi | SWAGAT | Gujarat)
Bookmark and Share Feedback Print
 
ಗುಜರಾತ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಪಾರದರ್ಶಕ ಆಡಳಿತ ಅಲ್ಲಿದೆ ಎಂಬ ವರದಿಗಳಿಗಿಂತ ಗತಕಾಲದ ಸುದ್ದಿಗಳನ್ನು ವೈಭವೀಕರಿಸುವುದರಲ್ಲೇ ಮಾಧ್ಯಮಗಳು ಮತ್ತು ರಾಜಕಾರಣಿಗಳು ವ್ಯಸ್ತರಾಗಿರುವ ಹೊತ್ತಿನಲ್ಲಿ ವಿಶ್ವಸಂಸ್ಥೆಯಿಂದ ಬಂದಿರುವ ತಾಜಾ ಸುದ್ದಿಯಿದು.

ಸಾರ್ವಜನಿಕ ಆಡಳಿತದಲ್ಲಿ ಹೊಸತನ ಕಂಡುಕೊಂಡಿದ್ದಾರೆಂದು ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರಕ್ಕೆ ವಿಶ್ವಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸಿದೆ. ಅಂದ ಹಾಗೆ ಈ ಪ್ರಶಸ್ತಿಯನ್ನು ಘೋಷಿಸಿರುವುದು ನೇರವಾಗಿ ಗುಜರಾತಿಗಲ್ಲ, ಭಾರತಕ್ಕೆ. ಆ ಮೂಲಕ ದೇಶದಲ್ಲೇ ಗುಜರಾತ್ ಆಡಳಿತವು ಗರಿಮೆಯನ್ನು ಪಡೆದುಕೊಂಡಿದೆ.

ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆಯ ಸುಧಾರಣೆ, ವಿಶ್ವಾಸಾರ್ಹತೆ ಮತ್ತು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದನ್ನು ಪರಿಗಣಿಸಿ ಗುಜರಾತ್ ಸರಕಾರಕ್ಕೆ ಏಷಿಯಾದಲ್ಲೇ ಎರಡನೇ ಸ್ಥಾನ ದೊರಕಿದೆ. ಮೊದಲ ಸ್ಥಾನ ಕೊರಿಯಾ ಪಾಲಾಗಿದೆ.

ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವಾದ ಜೂನ್ 23ರಂದು ಈ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗವು ತಿಳಿಸಿದೆ.

ಇದು ಸ್ವಾಗತ್ ಯೋಜನೆ..
ಇದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿರುವ ಪಾರದರ್ಶಕ ಆಡಳಿತದ ಒಂದು ಭಾಗ. ಮುಖ್ಯಮಂತ್ರಿಯೇ ನೇರವಾಗಿ ಪ್ರಜೆಗಳ ದೂರು-ದುಮ್ಮಾನಗಳನ್ನು ಪರಿಶೀಲಿಸಿ, ಅಧಿಕಾರಿಗಳ ಮೂಲಕ ಪರಿಹಾರ ಒದಗಿಸುವ ನೂತನ ವಿಧಾನ.

ಇದರಂತೆ ತಿಂಗಳಲ್ಲಿ ಒಂದು ದಿನ, ಅಂದರೆ ನಾಲ್ಕನೇ ಗುರುವಾರ ಮುಖ್ಯಮಂತ್ರಿಯನ್ನು ಪ್ರಜೆಗಳು ತಮ್ಮ ಸಮಸ್ಯೆಗಳೊಂದಿಗೆ ನೇರವಾಗಿ ಮುಖಾಮುಖಿಯಾಗಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿರುತ್ತಾರೆ. ಸಮಸ್ಯೆಯನ್ನು ಪರಿಶೀಲನೆ ನಡೆಸಿದ ನಂತರ ಮುಖ್ಯಮಂತ್ರಿ ಸ್ಥಳದಲ್ಲೇ ಪರಿಹಾರ ಸೂಚಿಸಿ ಆದೇಶ ನೀಡುತ್ತಾರೆ.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ವಿಸ್ತೃತವಾಗಿ ಬರೆದು ಅರ್ಜಿ ಸಲ್ಲಿಸಿದ ನಂತರ ಅದು ಯಾವ ಹಂತದಲ್ಲಿದೆ, ಪ್ರಕ್ರಿಯೆ ಸ್ಥಗಿತಗೊಂಡಿದೆಯೇ ಅಥವಾ ಸಾಗುತ್ತಿದೆಯೇ ಎಂಬುದನ್ನು ಇಂಟರ್ನೆಟ್ ಮೂಲಕ ಆನ್‌ಲೈನ್‌ನಲ್ಲಿ ನೋಡಬಹುದಾಗಿದೆ.

ಪ್ರಶಸ್ತಿ ಪಡೆದ ಇತರ ರಾಷ್ಟ್ರಗಳು...
ಇದೇ ವಿಭಾಗದಲ್ಲಿ ಯೂರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಜರ್ಮನಿಗೆ ಮೊದಲ ಸ್ಥಾನ ಹಾಗೂ ಅಲ್ಬೇನಿಯಾಕ್ಕೆ ಎರಡನೇ ಸ್ಥಾನ, ಪಶ್ಚಿಮ ಏಷಿಯಾದಲ್ಲಿ ಬಹ್ರೈನ್ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿವೆ.

ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆ ವಿಭಾಗದಲ್ಲಿ ಆಫ್ರಿಕಾ ಖಂಡದಲ್ಲಿ ತುನೇಷಿಯಾ ಮೊದಲ ಸ್ಥಾನ ಪಡೆದಿದೆ. ಇಲ್ಲಿ ತಾಂಜಾನಿಯಾದ್ದು ಎರಡನೇ ಸ್ಥಾನ.

ಇದೇ ವಿಭಾಗದಲ್ಲಿ ಏಷಿಯಾ ಖಂಡದ ಮೊದಲ ಸ್ಥಾನ ಆಸ್ಟ್ರೇಲಿಯಾಕ್ಕೆ ಸಂದರೆ, ಎರಡನೇ ಸ್ಥಾನ ಮತ್ತೆ ಕೊರಿಯಾ ಪಾಲಾಗಿದೆ. ಯೂರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಕೆನಡಾ, ಇಟಲಿ ಹಾಗೂ ಪಶ್ಚಿಮ ಏಷಿಯಾದಲ್ಲಿ ಸೌದಿ ಅರೇಬಿಯಾ, ಒಮನ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಗಿಟ್ಟಿಸಿವೆ.

ನೂತನ ವಿಧಾನಗಳ ಮೂಲಕ ಸಾರ್ವಜನಿಕ ನೀತಿ ನಿರೂಪಿಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಭಾಗದಲ್ಲಿ ಏಷಿಯಾ ಖಂಡದಲ್ಲೇ ಜಪಾನ್‌ಗೆ ಮೊದಲ ಸ್ಥಾನ ದೊರಕಿದೆ. ಎರಡನೇ ಸ್ಥಾನ ಆಸ್ಟ್ರೇಲಿಯಾದ್ದು.

ಯೂರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಇಟಲಿ, ಲ್ಯಾಟಿನ್ ಅಮೆರಿಕಾ ಮತ್ತು ಕೆರೆಬಿಯನ್‌ನಲ್ಲಿ ಬ್ರೆಜಿಲ್ ಹಾಗೂ ಪಶ್ಚಿಮ ಏಷಿಯಾದಲ್ಲಿ ಲೆಬೆನಾನ್ ಮೊದಲ ಸ್ಥಾನಗಳನ್ನು ಪಡೆದುಕೊಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ