ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜ್ಞಾನೇಶ್ವರಿ ದುರಂತಕ್ಕೂ ನಕ್ಸಲರಿಗೂ ಸಂಬಂಧವಿಲ್ಲ: ಕಿಶನ್‌ಜೀ
(Maoists | Jnaneswari disaster | Kishenji | West Midnapore)
ಪಶ್ಚಿಮ ಬಂಗಾಲದ ಮಿಡ್ನಾಪುರದಲ್ಲಿ ಮೇ 28ರಂದು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಮಾವೋವಾದಿಗಳು ಕಾರಣರಲ್ಲ, ನಾವು ಅದರಲ್ಲಿ ಪಾಲ್ಗೊಂಡಿಲ್ಲ ಎಂದು ನಕ್ಸಲ್ ನಾಯಕ ಕಿಶನ್‌ಜೀ ವಾದಿಸಿದ್ದಾನೆ.
148 ಮಂದಿಯ ಸಾವಿಗೆ ಕಾರಣವಾದ ಘಟನೆಯಲ್ಲಿ ನಕ್ಸಲ್ ಪಾತ್ರವಿಲ್ಲ. ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಉರುಳಿಸಿದ್ದು ನಾವಲ್ಲ. ಅದನ್ನು ಮಾಡಿದರ ಜತೆ ನಮಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಜ್ಞಾತ ಸ್ಥಳದಿಂದ ಕಿಶನ್‌ಜೀ ಸ್ಪಷ್ಟನೆ ಕಳುಹಿಸಿದ್ದಾನೆ.
ಈ ದುರ್ಘಟನೆಗೆ ಮಾವೋವಾದಿಗಳತ್ತ ಬೆಟ್ಟು ಮಾಡಿ ತೋರಿಸುತ್ತಿರುವ ಪೊಲೀಸರತ್ತ ಕಿಡಿ ಕಾರಿರುವ ನಕ್ಸಲ್ ನಾಯಕ, ನಾವು ಈ ಘಟನೆಯಲ್ಲಿ ಪಾಲ್ಗೊಂಡಿಲ್ಲ ಎಂದು ಹಿಂದೆಯೇ ಹೇಳಿದ್ದೇವೆ. ಪೊಲೀಸರು ಇದೀಗ ತಮ್ಮದೇ ಕಥೆಗಳನ್ನು ಕಟ್ಟುತ್ತಿದ್ದಾರೆ ಎಂದಿದ್ದಾನೆ.
ನಾವು ಜನರಿಗಾಗಿ ಹೋರಾಟ ಮಾಡುತ್ತಿರುವವರು. ಖಂಡಿತಾ ಅವರ ಜೀವಕ್ಕೆ ನಾವು ಹಾನಿ ಮಾಡಲಾರೆವು ಎಂದು ಮಾವೋವಾದಿ ಪಾಲಿಟ್‌ಬ್ಯೂರೋ ಸದಸ್ಯನಾಗಿರುವ ಕಿಶನ್‌ಜೀ ತಿಳಿಸಿದ್ದಾನೆ.
ಕಳೆದೊಂದು ತಿಂಗಳಿನಿಂದ ಯಾರ ಸಂಪರ್ಕಕ್ಕೂ ಸಿಗದೆ ದೂರ ಉಳಿದಿದ್ದ ಕಿಶನ್‌ಜೀ ಗಾಯಗೊಂಡಿದ್ದಾನೆ ಎಂಬ ಪೊಲೀಸರ ಹೇಳಿಕೆ ಪುಷ್ಠಿ ನೀಡಿರುವ ಆತ, ತಾನು ಮಾರ್ಚ್ 25ರಂದು ಹಾಟಿಲೋತ್ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದೆ. ನಂತರ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸ್ಥಳವೊಂದರಲ್ಲಿ ಅಡಗಿಕೊಂಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಹಿರಿಯ ನಕ್ಸಲ್ ನಾಯಕ ಬಿಕಾಸ್ ಮತ್ತು ಮಹಿಳಾ ನಾಯಕಿ ತಾರಾ ಜತೆಗೆ ಕಿಶನ್‌ಜೀ ಅಡಗಿಕೊಂಡಿದ್ದಾನೆ ಎಂದು ಇತ್ತೀಚೆಗಷ್ಟೇ ಮಿಡ್ನಾಪುರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ವರ್ಮಾ ತಿಳಿಸಿದ್ದರು.