26/11ರ ಮುಂಬೈ ಭಯೋತ್ಪಾದಕರ ದಾಳಿ ವಿಚಾರಣೆಗೆ ಸಂಬಂಧಿಸಿದಂತೆ ನೆರೆಯ ಪಾಕಿಸ್ತಾನ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.
ದ್ವಿಪಕ್ಷೀಯ ಮಾತುಕತೆ ಪುನಾರಂಭಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಭಾರತ ಹೇಳಿಕೆಯು ಮಹತ್ವ ಗಿಟ್ಟಿಸಿದೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ಒದಗಿಸಿಲಾಗಿರುವ ಸಾಕ್ಷಾಧಾರಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಒತ್ತಾಯಿಸಿದರು.
ಮುಂಬರುವ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ವಿಷಯ ಪ್ರಮುಖ ಚರ್ಚಾ ವಿಷಯವಾಗಲಿದ್ದು, ಕೇಂದ್ರ ಗೃಹ ಸಚಿವ ಪಾಕಿಸ್ತಾನದ ಒಳಾಡಳಿತ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದವರು ಹೇಳಿದರು.
ಇತ್ತೀಚೆಗಷ್ಟೇ ಭಾರತ ಮುಂಬೈ ಭಯೋತ್ಪಾದಕರ ದಾಳಿಗೆ ಸಂಬಂಧಪಟ್ಟಂತೆ ಪಾಕ್‌ಗೆ 11 ಹೆಚ್ಚುವರಿ ಸಾಕ್ಷಗಳನ್ನು ಒದಗಿಸಿತ್ತು. ಇದರ ಆಧಾರದಲ್ಲಿ ಪಾಕಿಸ್ತಾನದಿಂದ ಖಚಿತ ಕ್ರಮ ಉಂಟಾಗಬೇಕಾಗಿದೆ ಎಂದು ನಿರುಪಮಾ ಒತ್ತಾಯಿಸಿದರು.
ಕದನ ವಿರಾಮ ಉಲ್ಲಂಘನೆಯನ್ನು ಕೂಡಾ ಗಂಭೀರವಾಗಿ ಪರಿಗಣಿಸಲಾಗಿದೆ ಎಂದವರು ಹೇಳಿದರು. ಈ ಬಗ್ಗೆ ಪಾಕ್ ಸರಕಾರಕ್ಕೆ ತಿಳಿಸಲಾಗಿದೆ ಎಂದು ನಿರುಪಮಾ ಹೇಳಿದರು.
ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಬುಧವಾರ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.