ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಹೆಸರು ಬಾಬರ್ ಆಲಿ, ವಯಸ್ಸು 17, ಹೆಡ್‌ಮಾಸ್ಟರ್! (Babar Ali | India | West Bengal | free school)
Bookmark and Share Feedback Print
 
ಈ ಕೆಲಸ ನಾನು ಮಾಡದೇ ಇದ್ದರೆ ಮತ್ಯಾರು ಮಾಡುತ್ತಾರೆ ಎಂದು ಪ್ರಶ್ನಿಸುತ್ತಾನೆ ಹತ್ತಾರು ಬಡಮಕ್ಕಳಿಗೆ ಪಾಠ ಹೇಳುವ ಹೆಡ್‌ಮಾಸ್ಟರ್ ಬಾಬರ್ ಆಲಿ. ಆತನಂತೆ ನಮ್ಮ ಸಮಾಜವೂ ಬದಲಾದರೆ ಎಷ್ಟು ಚೆನ್ನ ಎಂಬ ಯೋಚನೆ ಕಂಡವರಿಗೆ ಬರದೇ ಇರದು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಬಾಬರ್ ಆಲಿಯ ವಯಸ್ಸು ಕೇವಲ 17. ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಈತ ಉಚಿತವಾಗಿ ಶಾಲೆಯನ್ನು ನಡೆಸುತ್ತಿರುವುದು. ಪಶ್ಚಿಮ ಬಂಗಾಲದ ಕೊಲ್ಕತ್ತಾ ಬಳಿಯಿದೆ ಈ ಶಾಲೆ. ಆತನೇ ಸ್ವತಃ ವಿದ್ಯಾರ್ಥಿಯೆನ್ನುವುದು ಮತ್ತೊಂದು ವಿಶೇಷ.

ತೀರಾ ಬಡತನವೇ ತುಂಬಿಕೊಂಡಿರುವ ಊರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಯಾರೂ ಒಪ್ಪುತ್ತಿಲ್ಲ ಎಂಬುದನ್ನು ಬಾಬರ್ ಮನಗಂಡಿದ್ದ. ದನ ಕಾಯುವುದಕ್ಕೋ, ಯಾರದೋ ಮನೆಯ ಕೆಲಸಕ್ಕೋ ಮಕ್ಕಳನ್ನು ಹಚ್ಚುತ್ತಿದ್ದುದನ್ನು ಕಂಡು ಮರುಗಿದ್ದ. ಅವರಿಗೆ ಎಬಿಸಿಡಿ ಎಂದರೆ ಏನೆಂದೂ ಗೊತ್ತಿರಲಿಲ್ಲ. ಅದನ್ನು ಕಲಿಯಬೇಕೆಂಬ ಅರಿವು ಕೂಡ ಇರದ ವಯಸ್ಸದು. ಅದನ್ನು ಮೂಡಿಸಿ, ಅವರನ್ನು ಶಾಲೆಗೆ ಬರುವಂತೆ ಮಾಡಿದ ಖ್ಯಾತಿ ಬಾಬರನದ್ದು.

ಈತ ನಡೆಸುತ್ತಿರುವ ಶಾಲೆಗೆ ಹೆತ್ತವರಿಂದ ಸಹಾಯ ಪಡೆದುಕೊಳ್ಳುತ್ತಿಲ್ಲ. ಹಾಗೆಂದು ಶಾಲೆಯೇನೂ ಆಧುನಿಕ ಪೀಠೋಪಕರಣಗಳಿಂದ ಮೇಳೈಸುತ್ತಿಲ್ಲ. ಇಲ್ಲಿ ಸರಿಯಾದ ಡೆಸ್ಕ್‌ಗಳಾಗಲೀ, ಕುರ್ಚಿಗಳಾಗಲೀ ಇಲ್ಲ. ಮರದ ತುಂಡುಗಳನ್ನು ಸೇರಿಸಿ, ಬೆಂಚು-ಮೇಜುಗಳನ್ನು ಮಾಡಲಾಗಿದೆ. ತೆಂಗಿನ ಮರದಡಿಯಲ್ಲೇ ಪಾಠ, ಪೇರಲೆ ಮರದಡಿಯಲ್ಲೇ ಊಟ. ಇತ್ತೀಚೆಗೆ ತಗಡು ಶೀಟುಗಳನ್ನು ಹೊದಿಸಲಾಗುತ್ತಿದೆ. ಎಲ್ಲದಕ್ಕಿಂತಲೂ ವಿದ್ಯೆಗಿಲ್ಲಿ ಕೊರತೆಯಿಲ್ಲ ಎನ್ನುವುದೇ ಪ್ರಮುಖ ವಿಚಾರ.

ಬಾಬರ್ ಆಲಿ ಈಗಷ್ಟೇ ಪಿಯುಸಿ ಮುಗಿಸಿದ್ದಾನೆ. ಕಾಲೇಜಿಗೆ ಹೋಗುವ ದಿನಗಳಲ್ಲಿ ಮಧ್ಯಾಹ್ನ ಮೂರು ಗಂಟೆಯ ನಂತರ ರಾತ್ರಿಯವರೆಗೆ ಶಾಲೆಯನ್ನು ನಡೆಸಲಾಗುತ್ತಿತ್ತು. ರಜಾ ದಿನಗಳಲ್ಲಿ ಫುಲ್ ಟೈಮ್. ತನ್ನ ವಿದ್ಯಾಭ್ಯಾಸಕ್ಕೆ ಇದರಿಂದ ಯಾವುದೇ ತೊಂದರೆಯಾಗಿಲ್ಲ ಎನ್ನುತ್ತಾನೀತ. ಈತನ ಹಲವು ಗೆಳೆಯರು ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಾಗಿ ಸಹಕಾರ ನೀಡುತ್ತಿದ್ದಾರೆ.

ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ಶಾಲೆಯಿದು. ಸುಮಾರು 800 ವಿದ್ಯಾರ್ಥಿ-ವಿದ್ಯಾರ್ಥಿನಿಯರಿದ್ದಾರೆ. ಹಿಂದೂ-ಮುಸ್ಲಿಂ ಬೇಧವಿಲ್ಲ, ಇದುವರೆಗೂ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಸರಕಾರಿ ಶಾಲೆಗಳಲ್ಲೇ ಶುಲ್ಕ ಪಡೆಯುತ್ತಿರುವ ಹೊತ್ತಿನಲ್ಲಿ, ಹಣವಿಲ್ಲದೆ ನಡೆಯುತ್ತಿರುವ ಶಾಲೆಯಿದು ಎಂದಾಗ ಮೂಗಿನ ಮೇಲೆ ಬೆರಳಿಡದವರಿಲ್ಲ.

ಕೊಲ್ಕತ್ತಾ ಸಮೀಪದ ಮುರ್ಷೀದಾಬಾದ್ ಜಿಲ್ಲೆಯ ಬಾಬ್ತಾ ಗ್ರಾಮದಲ್ಲಿದೆ ಈ ಶಾಲೆ. ತನಗೆ ಕೇವಲ ಒಂಬತ್ತು ವರ್ಷ ವಯಸ್ಸಾಗಿದ್ದಾಗ ಬಾಬರ್ ಶಾಲೆ ಆರಂಭಿಸಿದ್ದ. ಇದೀಗ 'ಆನಂದ ಶಿಕ್ಷಾ ನಿಕೇತನ್' ಎಂಬ ಸಂಸ್ಥೆಯೊಂದು ಈತನಿಗೆ ಸಹಕರಿಸುತ್ತಿದೆ. ಆ ಹೆಸರಿನಲ್ಲಿ ಶಿಕ್ಷಣ ಸೇವೆ ಮುಂದುವರಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಇತರರು ಆರ್ಥಿಕ ಸಹಕಾರವನ್ನೂ ನೀಡುತ್ತಿರುವುದನ್ನು ಬಾಬರ್ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದಾನೆ.

ಇದೆಲ್ಲ ಕಷ್ಟವಾಗುತ್ತಿಲ್ಲವೇ ಎಂದು ಬಾಬರನಲ್ಲಿ ಪ್ರಶ್ನಿಸಿದರೆ ಹಿಂದೆ ಮುಂದೆ ಯೋಚನೆ ಮಾಡದೇ ಆತ ನೀಡುವ ಉತ್ತರವಿದು -- ಇದನ್ನು ನಾನು ಮಾಡದೇ ಇದ್ದರೆ ಬೇರೆ ಯಾರು ಮಾಡುತ್ತಾರೆ? ನಮ್ಮ ದೇಶವನ್ನು ಕಟ್ಟಲು ನಾನು ಬಯಸುತ್ತಿದ್ದೇನೆ. ಈ ಕೆಲಸವನ್ನು ಯಾವುದೇ ಕಾರಣಕ್ಕೂ ನಾನು ನಿಲ್ಲಿಸಲಾರೆ ಎಂದು ಸಾಧಾರಣ ಇಂಗ್ಲೀಷಿನಲ್ಲೇ ಹೇಳುತ್ತಾನೆ.

ಈಗಾಗಲೇ ಬಾಬರನ ಸಮಾಜ ಸೇವೆಯನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಬೆನ್ನು ತಟ್ಟಿವೆ. ಬೆಂಗಳೂರು, ನವದೆಹಲಿ, ಮುಂಬೈಗಳಲ್ಲಿ ಈತನಿಗೆ ಬಿರುದು-ಬಿನ್ನಾಣಗಳನ್ನೂ ನೀಡಿದವರಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮ ಬಿಬಿಸಿ ಈತನ ಸೇವೆಯನ್ನು ಜಗತ್ತಿಗೆ ಪರಿಚಯಿಸಿದ್ದನ್ನು ಕೂಡ ಆತ ನೆನಪಿಸಿಕೊಳ್ಳುತ್ತಾನೆ. ಆದರೂ ಸರಕಾರ ಉಚಿತ ಪುಸ್ತಕ, ಊಟ ಬಿಟ್ಟರೆ ಹೆಚ್ಚಿನ ಸಹಕಾರ ನೀಡುತ್ತಿಲ್ಲ ಎಂಬ ನೋವೂ ಆತನಲ್ಲಿದೆ.

ವಿಶ್ವದಲ್ಲೇ ಅತೀ ಎಳೆಯ ಮುಖ್ಯೋಪಾಧ್ಯಾಯ ಎಂದು ಹೆಸರು ಮಾಡಿರುವ, ಸಮಾಜ ಸೇವೆ ಮಾಡುತ್ತಿರುವ ಬಾಬರನಿಗೊಂದು ಸಲಾಮು ಹೊಡೆಯದವರು ಯಾರು?
ಸಂಬಂಧಿತ ಮಾಹಿತಿ ಹುಡುಕಿ