ಕಾಲೇಜು ಉಪನ್ಯಾಸಕಿಯೊಬ್ಬಳನ್ನು ಮೂವರು ಶಿಕ್ಷಕರೇ ಸೇರಿಕೊಂಡು ಗುಡಿಸಿ ಗುಂಡಾಂತರ ಮಾಡಿದ ಪ್ರಕರಣವಿದು. ಯುವ ಪೀಳಿಗೆಗೆ ಸಭ್ಯತೆಯನ್ನು, ಭಾರತೀಯ ಸಂಸ್ಕೃತಿಯನ್ನು ಹೇಳಿಕೊಟ್ಟು ಮಾದರಿಯಾಗಬೇಕಾಗಿದ್ದ ಗುರುಗಳೇ ಮಹಿಳೆಯ ನಗ್ನ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಬಳಸಿಕೊಂಡಿದ್ದಾರೆ. ಇವರನ್ನು ಗುರುಗಳೆಂದು ಕರೆಯುವುದೇ ತಪ್ಪೇನೋ?
ಇಂತಹದ್ದೊಂದು ಹೇಯ ಕೃತ್ಯ ನಡೆದಿರುವುದು ಮೋದಿ ರಾಜ್ಯ ಗುಜರಾತಿನ ಮೆಹ್ಸಾನಾ ಜಿಲ್ಲೆಯ ಕಾಡಿ ತಾಲೂಕ್ ಎಂಬಲ್ಲಿ. ನೊಂದ ಯುವತಿ ಆತ್ಮಹತ್ಯೆಗೂ ವಿಫಲ ಯತ್ನ ನಡೆಸಿದ್ದಾಳೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಈ ಕಿರಾತಕ ಗುರುಗಳು ಕಳೆದ ಎಂಟು ತಿಂಗಳುಗಳಿಂದ 25ರ ಹರೆಯದ ಬಲಿಪಶುವನ್ನು ನಿರಂತರವಾಗಿ ತಮ್ಮ ದೈಹಿಕ ಆಕಾಂಕ್ಷೆಗಳಿಗಾಗಿ ಬಳಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಶ್ಲೀಲ ಫೋಟೋಗಳನ್ನೂ ತೆಗೆದು, ನಂತರ ಅದನ್ನೇ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
ಮೊದಲು ಅತ್ಯಾಚಾರ ಎಸಗಿದವನು ಮುಖೇಶ್ ಪಟೇಲ್. ಈತ ಇಲ್ಲಿನ ಕಾಡಿ ಗ್ರಾಮದ ನರಸಿಂಹಪುರ ಎಂಬಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ. ಯುವತಿಗೆ ಉಪನ್ಯಾಸಕಿ ಕೆಲಸ ಸಿಗಲು ಸಹಾಯ ಮಾಡಿದ್ದ ಈತ ನೆರೆ ಮನೆಯವ. ಅದನ್ನೇ ದುರ್ಬಳಕೆ ಮಾಡಿಕೊಂಡು ಆಕೆಯ ಜತೆ ದೈಹಿಕ ಸಂಬಂಧ ಬೆಳೆಸಿದ್ದ.
ನಂತರ ತನ್ನ ಇತರ ಇಬ್ಬರು ಗೆಳೆಯರನ್ನು ಕರೆಸಿಕೊಂಡಿದ್ದ. ಮೊದಲನೆಯವನು ದಿನೇಶ್ ಪಟೇಲ್. ಈತ ಸಚನಾ ಗ್ರಾಮದಲ್ಲಿ ಶಿಕ್ಷಕ. ಮತ್ತೊಬ್ಬ ಬಾಂಕೋಡಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ಕೇತನ್ ಠಾಕೂರ್.
ಆರೋಪಿಗಳಲ್ಲಿ ಕೇತನ್ ಠಾಕೂರ್ ಮತ್ತು ದಿನೇಶ್ ಪಟೇಲ್ ಮಾತ್ರ ಪೊಲೀಸರಿಗೆ ಸಿಕ್ಕಿದ್ದಾರೆ. ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಯುವತಿಯ ತಂದೆ ನೀಡಿದ ದೂರಿನಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಮೂವರು ಶಿಕ್ಷಕರ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳದಿಂದ ನೊಂದಿದ್ದ ಉಪನ್ಯಾಸಕಿ ಸೋಮವಾರ ಇಲ್ಲಿನ ಕಾಲೋಲ್ ಬಸ್ ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಇದುವರೆಗೂ ಪ್ರಜ್ಞೆ ಬಂದಿಲ್ಲ. ಆದರೆ ತನ್ನನ್ನು ಸತತ ಹಲವು ತಿಂಗಳುಗಳ ಕಾಲ ಈ ಮೂವರು ಅತ್ಯಾಚಾರ ನಡೆಸಿದ್ದಾರೆ ಎಂದೆಲ್ಲಾ ಆಕೆ ಬರೆದಿಟ್ಟಿರುವ ಚೀಟಿಯಲ್ಲಿ ವಿವರಣೆ ನೀಡಿದ್ದಾಳೆ.