ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರು ನೇಣಿಗೆ ಕೊನೆಗೂ ಕೇಂದ್ರ ಗ್ರೀನ್ ಸಿಗ್ನಲ್ (Home ministry | death penalty | Afzal Guru | Parliament attack)
Bookmark and Share Feedback Print
 
ಸಂಸತ್‌ಗೆ ದಾಳಿ ಮಾಡಿದ್ದ ಕಾಶ್ಮೀರಿ ಭಯೋತ್ಪಾದಕ ಮೊಹಮ್ಮದ್ ಅಫ್ಜಲ್ ಗುರುವಿಗೆ ಮರಣ ದಂಡನೆ ವಿಧಿಸುವಂತೆ ಕೊನೆಗೂ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ. ಉಗ್ರನ ಕ್ಷಮಾದಾನ ಅರ್ಜಿಯನ್ನು ತಳ್ಳಿ ಹಾಕುವಂತೆ ಸರಕಾರವು ರಾಷ್ಟ್ರಪತಿಯವರಿಗೆ ಸಲಹೆ ನೀಡಿದೆ ಎಂದು ವರದಿಗಳು ಹೇಳಿವೆ.

ಅದೇ ಹೊತ್ತಿಗೆ ಮಾಧ್ಯಮಗಳಲ್ಲಿ ಈ ವರದಿ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವಾಲಯ, ಅಫ್ಜಲ್ ಗುರು ಕ್ಷಮಾದಾನ ಅರ್ಜಿಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ.

2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ 2002ರ ಡಿಸೆಂಬರ್ 18ರಂದು ಸ್ಥಳೀಯ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು 2003ರ ಅಕ್ಟೋಬರ್ 29ರಂದು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಫ್ಜಲ್ ಮೇಲ್ಮನವಿಯನ್ನು 2005ರ ಆಗಸ್ಟ್ 4ರಂದು ಸುಪ್ರೀಂ ಕೋರ್ಟ್ ಕೂಡ ತಳ್ಳಿ ಹಾಕಿತ್ತು.
ಅಫ್ಜಲ್ ಗುರು
PR

2006ರ ಅಕ್ಟೋಬರ್ 20ರಂದು ತಿಹಾರ್ ಜೈಲಿನಲ್ಲಿ ಭಯೋತ್ಪಾದಕನನ್ನು ಗಲ್ಲಿಗೆ ಹಾಕುವಂತೆ ಸೆಷನ್ಸ್ ನ್ಯಾಯಾಲಯವು ಮುಹೂರ್ತವನ್ನೂ ನಿಗದಿಪಡಿಸಿತ್ತು. ಆದರೆ ಆತನ ಪತ್ನಿ ತಬಸಮ್ ಗುರು ನಾಲ್ಕು ವರ್ಷಗಳ ಹಿಂದೆ ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ಬಿದ್ದಿತ್ತು.

ಮೂಲಗಳ ಪ್ರಕಾರ ಗೃಹ ಸಚಿವಾಲಯವು ಅಫ್ಜಲ್ ಕ್ಷಮಾದಾನ ಅರ್ಜಿಯನ್ನು ಪರಿಶೀಲನೆ ನಡೆಸಿ, ತನ್ನ ಅಭಿಪ್ರಾಯವನ್ನು ಕಳೆದ ವಾರವೇ ರಾಷ್ಟ್ರಪತಿಯವರಿಗೆ ಕಳುಹಿಸಿದೆ. ಅಫ್ಜಲ್ ಎಸಗಿರುವುದು ಘೋರ ಅಪರಾಧವಾಗಿರುವುದರಿಂದ ಆತನಿಗೆ ಗಲ್ಲು ಶಿಕ್ಷೆ ನೀಡುವುದೇ ಉತ್ತಮ ಎಂದು ಸಚಿವಾಲಯ ಶಿಫಾರಸು ಮಾಡಿತ್ತು.

ಗೃಹ ಸಚಿವಾಲಯವು ತನ್ನ ಅಭಿಪ್ರಾಯವನ್ನು ತಿಳಿಸಿರುವುದರಿಂದ ಈಗ ಅಫ್ಜಲ್ ಭವಿಷ್ಯವನ್ನು ನಿರ್ಧರಿಸುವ ಸರದಿ ರಾಷ್ಟ್ರಪತಿಯವರದ್ದು. ಸಂವಿಧಾನದ 72ನೇ ವಿಧಿಯಡಿಯಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸುವಂತೆ ತನ್ನ ತೀರ್ಪನ್ನು ನೀಡಿದ್ದರೂ ಕಾಂಗ್ರೆಸ್ ನೇತತ್ವದ ಯುಪಿಎ ಸರಕಾರ ಮುಸ್ಲಿಂ ಓಟ್ ಬ್ಯಾಂಕ್ ಕಾರಣದಿಂದಾಗಿ ಭಯೋತ್ಪಾದಕರನ್ನು ರಕ್ಷಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಾ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ದೆಹಲಿ ಸರಕಾರವು ಅಫ್ಜಲ್ ಗುರು ಕಡತವನ್ನು ತಡೆ ಹಿಡಿಯುವಂತೆ ಈ ಹಿಂದಿನ ಗೃಹ ಸಚಿವ ಶಿವರಾಜ್ ಪಾಟೀಲ್ ಸೂಚನೆ ನೀಡಿದ್ದರೆಂಬುದು ಸ್ವತಃ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಬಹಿರಂಗಪಡಿಸಿದ್ದರು. ಆತನ ಗಲ್ಲು ಶಿಕ್ಷೆಗೆ ಆತುರ ಯಾಕೆ ಎಂದು ಕಾಂಗ್ರೆಸ್ ನಾಯಕರು ಕೂಡ ಟೀಕಾಕಾರರನ್ನು ಪ್ರಶ್ನಿಸುತ್ತಾ ಬಂದಿದ್ದರು. ಆದರೆ ಇದೀಗ ಕಳಂಕ ತೊಡೆದು ಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ