ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ, ವರುಣ್ ಬಳಕೆಗೆ ಯಾರ ಸಲಹೆಯೂ ಬೇಕಿಲ್ಲ: ಬಿಜೆಪಿ (BJP | JDU | Bihar | Nitish Kumar)
Bookmark and Share Feedback Print
 
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುತ್ತಿದೆ ಎಂಬಂತೆ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಮತ್ತು ಜೆಡಿಯುಗಳು ಪರೋಕ್ಷವಾಗಿ ಕಿತ್ತಾಡುತ್ತಾ, ಮೈತ್ರಿ ಮುಂದುವರಿಸಲು ಯತ್ನಿಸುತ್ತಿವೆ. ಈ ನಡುವೆ ಬಿಹಾರ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ನರೇಂದ್ರ ಮೋದಿ ಅಥವಾ ವರುಣ್ ಗಾಂಧಿಯವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ನಿರ್ಧಾರದ ಕುರಿತು ಯಾರ ಸಲಹೆಯೂ ನಮಗೆ ಅಗತ್ಯವಿಲ್ಲ ಎಂದಿದೆ.

ಕಳೆದೆರಡು ವಾರಗಳಿಂದ ಬಿಜೆಪಿ ಆಡಳಿತ ಪಕ್ಷಗಳಾದ ಜೆಡಿಯು ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಗುದ್ದಾಟಗಳು ಗೊತ್ತೇ ಇದೆ. ಇದರ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರಿಸುವ ಕುರಿತು ಬಿಜೆಪಿ ಮರು ಪರಿಶೀಲನೆ ನಡೆಸುತ್ತಿರುವುದು ಹೌದಾದರೂ, ಇದುವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಮಂಗಳವಾರ ರಾತ್ರಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಬಿಹಾರ ಘಟಕದ ಮುಖ್ಯಸ್ಥರ ಜತೆ ಮೈತ್ರಿ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೈನ್ ಸಭೆಯ ಬಳಿಕ ತಿಳಿಸಿದ್ದಾರೆ.

ಎಲ್.ಕೆ. ಅಡ್ವಾಣಿ ಸೇರಿದಂತೆ ಹಲವು ಬಿಜೆಪಿ ಮುಖಂಡರಿಗೆ 15 ವರ್ಷಗಳ ಹಳೆ ಮೈತ್ರಿಯನ್ನು ಮುರಿದುಕೊಳ್ಳಲು ಇಷ್ಟವಿಲ್ಲ. ಹಾಗೆಂದು ಸ್ವಾಭಿಮಾನವನ್ನು ಪಣಕ್ಕಿಡಲೂ ಅವರು ಸಿದ್ಧರಿಲ್ಲ. ಒಟ್ಟಾರೆ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯುತ್ತಿರುವ ಪರಿಸ್ಥಿತಿಯಲ್ಲಿರುವ ಜೆಡಿಯು-ಬಿಜೆಪಿ ಈಗ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬಲ್ಲಿಗೆ ಸ್ಥಿರವಾಗುವ ಸಾಧ್ಯತೆಗಳು ಕಾಣುತ್ತಿವೆ.

ರಾಜ್ಯ ಘಟಕದೊಂದಿಗೆ ಮಾತುಕತೆ ನಡೆಸಿರುವ ಗಡ್ಕರಿ ಗುರುವಾರ ನಾಗ್ಪುರದಲ್ಲಿ ಕೇಂದ್ರದ ಬಿಜೆಪಿ ನಾಯಕರ ಜತೆ ಸಮಾಲೋಚನೆ ನಡೆಸಲಿದ್ದಾರೆ. ನಂತರವಷ್ಟೇ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಮೋದಿ, ವರುಣ್ ನಿರ್ಧಾರ ನಮ್ಮದು...
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಫಿಲಿಭಿತ್ ಸಂಸದ ವರುಣ್ ಗಾಂಧಿಯವರನ್ನು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಬಳಸಿಕೊಳ್ಳಬಾರದು ಎಂಬ ಷರತ್ತಿಗೆ ಬದ್ಧವಾಗಿರುವುದಾದರೆ ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಕಿದ್ದ ಬೆದರಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ನಾವು ಅಂತಹ ಯಾವುದೇ ಸಂದೇಶವನ್ನು ಸ್ವೀಕರಿಸಿಲ್ಲ ಎಂದಿದೆ.

ಜೆಡಿಯು ಆ ರೀತಿಯ ಯಾವುದೇ ಸಂದೇಶವನ್ನು ನಮಗೆ ರವಾನಿಸಿಲ್ಲ. ಅಷ್ಟಕ್ಕೂ ನಮ್ಮ ಪಕ್ಷದಿಂದ ಯಾರು ಪ್ರಚಾರ ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ಬಿಜೆಪಿಯೇ ನಿರ್ಧರಿಸಬೇಕೇ ಹೊರತು, ಬೇರೆಯವರಲ್ಲ. ಈ ಸಂಬಂಧ ನಮಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಬಿಜೆಪಿ ವಕ್ತಾರ ಹುಸೈನ್ ತಿರುಗೇಟು ನೀಡಿದ್ದಾರೆ.

ವರುಣ್ ಅಥವಾ ಮೋದಿ ವಿಚಾರದ ಕುರಿತು ಜೆಡಿಯು ಷರತ್ತಿಗೆ ನಾವು ಬಗ್ಗುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಈಗಾಗಲೇ ನಿತೀಶ್ ಕುಮಾರ್ ಪಾಳಯಕ್ಕೆ ರವಾನಿಸಿದೆ. ಆದರೆ ಅತ್ತ ಜೆಡಿಯು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಬಿಜೆಪಿ ತನ್ನ ನಿಲುವಿಗೆ ಅಂಟಿಕೊಂಡಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವ ನಿರ್ಧಾರಕ್ಕೆ ಜೆಡಿಯು ಬರಲಿದೆ. ನಾವು ಕೂಡ ಯಾವುದೇ ರಾಜಿಗೆ ಸಿದ್ಧರಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಜೆಡಿಯು ನಾಯಕರು ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಮರ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್, ಇತ್ತೀಚೆಗಷ್ಟೇ ಗುಜರಾತ್ ಪ್ರಕಟಿಸಿದ್ದ ಜಾಹೀರಾತಿನಿಂದ ತೀವ್ರ ಅಸಮಾಧಾನಗೊಂಡಿದ್ದರು. ಆ ಜಾಹೀರಾತಿನಲ್ಲಿ ಮೋದಿ ಜತೆಗಿರುವ ಚಿತ್ರವನ್ನು ಪ್ರಕಟಿಸಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡಿದ್ದ ನಿತೀಶ್, ಗುಜರಾತ್ ಕೋಸಿ ಪ್ರವಾಹ ಸಂತ್ರಸ್ತರಿಗೆ ನೀಡಿದ್ದ ಪರಿಹಾರ ನಿಧಿಯನ್ನು ವಾಪಸ್ ಮಾಡಿದ್ದರು. ಇದನ್ನು ಜಾಹೀರಾತಿನಲ್ಲಿ ಮೋದಿ ಕೊಚ್ಚಿಕೊಂಡಿದ್ದರು ಎನ್ನುವುದು ಬಿಹಾರ ನೀಡುತ್ತಿರುವ ಕಾರಣ.
ಸಂಬಂಧಿತ ಮಾಹಿತಿ ಹುಡುಕಿ