ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಶ್ವ ತಮಿಳು ಸಮ್ಮೇಳನ; ದ್ರಾವಿಡ ಸಂಸ್ಕೃತಿ ಅನಾವರಣ (Tamil Nadu | World Classical Tamil Conference | M Karunanidhi | India)
Bookmark and Share Feedback Print
 
ಕೊಯಂಬತ್ತೂರಿನಲ್ಲಿ ಇಂದು ವಿಧ್ಯುಕ್ತವಾಗಿ ಆರಂಭಗೊಂಡಿರುವ ವಿಶ್ವ ತಮಿಳು ಸಮ್ಮೇಳನಕ್ಕೆ ಸಾಗರೋಪಾದಿಯಲ್ಲಿ ತಮಿಳರು ಹರಿದು ಬರುತ್ತಿದ್ದಾರೆ. ಇಂತಹದ್ದೊಂದು ಸಮ್ಮೇಳನವನ್ನು ನಡೆಸಿದ ನಂತರವೇ ರಾಜಕೀಯ ನಿವೃತ್ತಿ ಎಂದು ಹೇಳಿಕೊಂಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯ ಮುಖದಲ್ಲೀಗ ಸಂತೃಪ್ತಿಯ ಭಾವ ಕಾಣುತ್ತಿದೆ.

ದ್ರಾವಿಡ ಭಾಷೆ ಮತ್ತು ತಮಿಳು ಸಂಸ್ಕೃತಿಯನ್ನು ಜನಪ್ರಿಯತೆಗೊಳಿಸುವ ಉದ್ದೇಶದಿಂದ ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ವಿಶ್ವ ತಮಿಳು ಸಮ್ಮೇಳನವನ್ನು ಇಂದು ಮುಂಜಾನೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಉದ್ಘಾಟಿಸಿದ್ದಾರೆ. ಜಗತ್ತಿನಾದ್ಯಂತದ ಸಾವಿರಾರು ತಮಿಳು ಪಂಡಿತ-ಪಾಮರರು ಐದು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಮೆರುಗು ನೀಡುತ್ತಿದ್ದಾರೆ.
PR

ತಮಿಳುನಾಡು ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲಾ, ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಶ್ರೀಲಂಕಾದ ತಮಿಳು ವಿದ್ವಾಂಸ ವಿ. ಶಿವತಂಬಿ, ಯುನೆಸ್ಕೋ ನಿರ್ದೇಶಕ ಅರ್ಮುಗಂ ಪರಶುರಾಮನ್, ಸಂಸದ ಹಾಗೂ ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐನ ಡಿ. ರಾಜಾ, ಪಿಎಂಕೆ ಮುಖ್ಯಸ್ಥ ಎಸ್. ರಾಮದಾಸ್ ಮುಂತಾದ ಗಣ್ಯರು ಇಂದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಶಾಲೆಗಳಿಗೆಲ್ಲ ರಜೆ...
ತನ್ನ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ಮೊತ್ತ ಮೊದಲ ವಿಶ್ವ ತಮಿಳು ಸಮ್ಮೇಳನ ಸಂಪೂರ್ಣ ಯಶಸ್ವಿ ಕಾಣಬೇಕೆಂಬ ಉದ್ದೇಶದಿಂದ ಕರುಣಾನಿಧಿ ಸರಕಾರವು ತಮಿಳುನಾಡಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಸಮ್ಮೇಳನದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲೆಂದು 10,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಮಾಲೋಚನೆ ಮತ್ತು ಗೋಷ್ಠಿಗಳಿಗಾಗಿ 20 ಸಭಾಭವನಗಳನ್ನು ನಿರ್ಮಿಸಲಾಗಿದೆ. ಪ್ರಮುಖ ನಗರಗಳಿಂದ ವಿಶೇಷ ರೈಲುಗಳು, ಬಸ್ಸುಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಗಿನ್ನೆಸ್ ದಾಖಲೆ ಮಾಡಲಿದೆಯೇ ಸಭಾಂಗಣ?
ಈ ಸಮ್ಮೇಳನದ ಸಭಾಂಗಣ ನೋಡಿದರೆ ಚೋಳ ಅಥವಾ ಪಾಂಡ್ಯರ ಅರಮನೆಗೆ ಪ್ರವೇಶಿಸಿದಂತೆ ಭಾಸವಾಗುತ್ತದೆ. ತಾಳೆ ಗರಿಗಳಿಂದ ಅದ್ಭುತವಾಗಿ ಹೆಣೆದಿರುವ ಈ ಸಭಾಂಗಣದ ಮುಖದ್ವಾರ ಎಂಥವರನ್ನೂ ಆಕರ್ಷಿಸುತ್ತಿದೆ. ಇಡೀ ಸಭಾಂಗಣವು 7.5 ಲಕ್ಷ ಚದರ ಅಡಿ ವಿಸ್ತಾರವಾಗಿದ್ದು, ಅಂದರೆ ಸುಮಾರು ಒಂದು ಕಿ.ಮೀ. ಉದ್ದವಿದೆ! 3 ಲಕ್ಷ ತಾಳೆ ಗರಿಗಳನ್ನು ಬಳಸಿ ಆಕರ್ಷಕವಾಗಿ, ವಿಸ್ತಾರವಾಗಿ ಕಟ್ಟಲಾಗಿರುವ ಈ ಪೆಂಡಾಲ್‌ನ ವಿಸ್ತಾರ ಮತ್ತು ಕಲಾವೌಭವಕ್ಕೆ ಗಿನ್ನೆಸ್ ದಾಖಲೆ ಪುಸ್ತಕಗಳಿಗೆ ಸೇರಿಸುವ ಪ್ರಯತ್ನಗಳೂ ನಡೆದಿವೆ.

ತಮಿಳುನಾಡಿನ ಸುಮಾರು ಒಂದು ಲಕ್ಷ ಮಂದಿ, 50 ದೇಶಗಳಿಂದ ಸುಮಾರು 1200 ತಮಿಳು ವಿದ್ವಾಂಸರು ಈಗಾಗಲೇ ಕೊಯಂಬತ್ತೂರಿನಲ್ಲಿ ಬಂದಿಳಿದಿದ್ದಾರೆ. ಇವೆಲ್ಲವನ್ನೂ ನೋಡುವಾಗ, ಕನ್ನಡಕ್ಕೆ ಇಂಥದ್ದೊಂದು ಸಮಾರಂಭ ಯಾವಾಗ ನಡೆದೀತು ಎಂಬ ನಿರೀಕ್ಷೆ ಹುಟ್ಟದಿರಲು ಸಾಧ್ಯವೇ ಇಲ್ಲ.

ಇದು ಒಂಬತ್ತನೇ ಸಮ್ಮೇಳನ...
ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ನಂತರ ನಡೆಯುತ್ತಿರುವ ಮೊತ್ತ ಮೊದಲ ವಿಶ್ವ ತಮಿಳು ಸಮ್ಮೇಳನವಿದು. ಒಟ್ಟಾರೆಯಾಗಿ ಒಂಬತ್ತನೇಯದು. ಮೊದಲ ವಿಶ್ವ ತಮಿಳು ಸಮ್ಮೇಳನ 1966ರಲ್ಲಿ ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದಿತ್ತು.

ನಂತರ 1968ರಲ್ಲಿ ಮದ್ರಾಸ್, 1970ರಲ್ಲಿ ಫ್ರಾನ್ಸ್‌ನ ಪ್ಯಾರಿಸ್, 1974ರಲ್ಲಿ ಶ್ರೀಲಂಕಾದ ಜಾಫ್ನಾದಲ್ಲಿ, 1981ರಲ್ಲಿ ಮಧುರೈಯಲ್ಲಿ, 1987 ಮತ್ತು 1989ರಲ್ಲಿ ಮಲೇಷಿಯಾ ಮತ್ತು ಮಾರಿಷಸ್‌ಗಳಲ್ಲಿ ಹಾಗೂ 1995ರಲ್ಲಿ ತಂಜಾವೂರ್‌ನಲ್ಲಿ ವಿಶ್ವ ತಮಿಳು ಸಮ್ಮೇಳನ ನಡೆದಿತ್ತು. ಇದೀಗ ಬರೋಬ್ಬರಿ 15 ವರ್ಷಗಳ ಅಂತರದ ಬಳಿಕ ಕೊಯಂಬತ್ತೂರಿನಲ್ಲಿ ನಡೆಯುತ್ತಿದೆ.

ಇದು ದುಂದುವೆಚ್ಚ: ಜಯಲಲಿತಾ
ಅತ್ತ ಜಗತ್ತಿನಾದ್ಯಂತದ ತಮಿಳರು ಕೊಯಂಬತ್ತೂರಿನತ್ತ ಗಮನ ನೆಟ್ಟಿದ್ದರೆ, ಇತ್ತ ಪ್ರತಿಪಕ್ಷ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಸರಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.

ಸರಕಾರವು ಜನರ 400 ಕೋಟಿ ರೂಪಾಯಿ ಹಣವನ್ನು ಸಮ್ಮೇಳನದ ಹೆಸರಿನಲ್ಲಿ ಪೋಲು ಮಾಡುತ್ತಿದೆ. ಇದು ಡಿಎಂಕೆ ಕಾರ್ಯಕ್ರಮದಂತೆ ಭಾಸವಾಗುತ್ತಿದೆ. ಅವರು ತಮಿಳಿನ ಉದ್ಧಾರಕ್ಕೆ ಯಾವುದೇ ಕೊಡುಗೆ ನೀಡಲು ಹೊರಟಿದ್ದಾರೆ ಎಂಬ ಭಾವನೆ ಬರುತ್ತಿಲ್ಲ. ಮುಖ್ಯಮಂತ್ರಿಯವರಿಗೆ ಜನ ಸಂದಣಿ ನೋಡುವುದಷ್ಟೇ ಬೇಕಾಗಿದೆ ಎಂದು ಅವರು ಟೀಕಿಸಿದ್ದಾರೆ.

ಸಾರ್ವಜನಿಕರ ಹಣವನ್ನು ಮುಖ್ಯಮಂತ್ರಿಯವರು ಸಮ್ಮೇಳನವನ್ನು ಮುಂದಿಟ್ಟುಕೊಂಡು ಖರ್ಚು ಮಾಡುತ್ತಿದ್ದಾರೆ. ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳಿಗೆ ಅಧಿಕೃತ ಸ್ಥಾನಮಾನ ಕೊಡಿಸಬೇಕೆಂಬುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ರಾಜ್ಯದ ರೈತರು ಪಡುತ್ತಿರುವ ಬವಣೆಯನ್ನು ನೀಗಿಸಲು ಪುರುಸೊತ್ತಿಲ್ಲ ಎನ್ನುವ ಜಯಲಲಿತಾ ಕೂಗಿಗೆ ಎಂಡಿಎಂಕೆ ಕೂಡ ಬೆಂಬಲಿಸಿದೆ.

ಈ ಎರಡೂ ಪಕ್ಷಗಳ ಮುಖಂಡರು ವಿಶ್ವ ತಮಿಳು ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ