ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯಿಂದ ಅನಿರೀಕ್ಷಿತ ಫಲಿತಾಂಶಗಳ ನಿರೀಕ್ಷೆಯಲ್ಲಿ ನಾವಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸಂಕೀರ್ಣವಾಗಿರುವುದರಿಂದ ಮಾತುಕತೆಯಿಂದ ನಾನು ಅದ್ಭುತ ಅಥವಾ ಅನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಗಳ ಹಿನ್ನೆಲೆಯಲ್ಲಿ ಸಚಿವರ ಮಾತುಗಳು ಮಹತ್ವ ಪಡೆದುಕೊಂಡಿವೆ.
ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳು ಇಂದು ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸಲಿದ್ದು, ಇದು ಮುಂದಿನ ತಿಂಗಳು ಪಾಕಿಸ್ತಾನ ರಾಜಧಾನಿಯಲ್ಲಿ ನಡೆಯಲಿರುವ ವಿದೇಶಾಂಗ ಸಚಿವರುಗಳ ಮಾತುಕತೆಗೆ ವೇದಿಕೆ ಸಿದ್ಧಗೊಳಿಸುವುದಷ್ಟೇ ಎಂದೂ ಕೃಷ್ಟ ವಿವರಿಸಿದ್ದಾರೆ.
ಇಲ್ಲಿನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಆರೋಗ್ಯ ವಿಚಾರಿಸಲು ಬಂದಿದ್ದ ಸಂದರ್ಭದಲ್ಲಿ ಕೃಷ್ಣ ಈ ಪ್ರತಿಕ್ರಿಯೆ ನೀಡಿದರು.
ಕೃಷ್ಣ ಪ್ರವಾಸದ ನಂತರ ಗೃಹ ಸಚಿವ ಪಿ. ಚಿದಂಬರಂ ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಸಾರ್ಕ್ ಗೃಹ ಸಚಿವರುಗಳ ಸಮಾವೇಶಕ್ಕಾಗಿ ಅವರು ಜುಲೈಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಆ ಸಂದರ್ಭದಲ್ಲಿ ಪಾಕ್ ಸಚಿವರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಇಂದು ನಿರುಪಮಾ ರಾವ್ ಮತ್ತು ಸಲ್ಮಾನ್ ಬಶೀರ್ ತಮ್ಮ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದು, ಭಾರತದ ವಿದೇಶಾಂಗ ಕಾರ್ಯದರ್ಶಿ ಈಗಾಗಲೇ ಪಾಕಿಸ್ತಾನ ತಲುಪಿದ್ದಾರೆ. ಈ ಸಂದರ್ಭದಲ್ಲಿ ಪಾಕ್ ನೆಲದಿಂದ ನಡೆಯುತ್ತಿರುವ ಭಾರತ ವಿರೋಧಿ ಕಾರ್ಯಾಚರಣೆಗಳ ವಿರುದ್ಧ ಭಾರತ ಪ್ರಸ್ತಾಪ ನಡೆಸಲಿದೆ ಎಂದು ಹೇಳಲಾಗಿದೆ.