ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ ಕರ್ನಾಟಕಕ್ಕೆ ಶರಣಾಗಿದ್ದಾರೆ: ಜಯಲಲಿತಾ ಕಿಡಿ (Karunanidhi | Tamil Nadu | Jayalalithaa | Karnataka)
Bookmark and Share Feedback Print
 
ಕರ್ನಾಟಕ ಕಾವೇರಿ ನೀರನ್ನು ಬಿಡದ ಕಾರಣ ತಮಿಳುನಾಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಮುಖ್ಯಮಂತ್ರಿ ಎಂ. ಕರುಣಾನಿಧಿ ಏನೂ ಆಗಿಲ್ಲವೆಂಬಂತೆ ಸಮ್ಮೇಳನಗಳಲ್ಲಿ ಮುಳುಗಿದ್ದಾರೆ. ಅವರು ಪಕ್ಕದ ರಾಜ್ಯಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ರಾಜಕೀಯ ಎದುರಾಳಿ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಹರಿಹಾಯ್ದಿದ್ದಾರೆ.

ರೈತರಿಗೆ ಕುರುವೈ (ಅಲ್ಪಾವಧಿ ಬೆಳೆ) ಬೇಸಾಯ ಮಾಡಲು ಸತತ ಎರಡನೇ ವರ್ಷ ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಮೂರು ಲಕ್ಷ ಹೆಕ್ಟೇರ್ ಬೇಸಾಯಕ್ಕೆ ಬಳಕೆಯಾಗುವ ಬದಲು ಕೇವಲ 53,000 ಹೆಕ್ಟೇರ್‌ಗಳಲ್ಲಿ ಮಾತ್ರ ವ್ಯವಸಾಯ ಮಾಡಲಾಗಿದೆ. ಅದರಲ್ಲೂ ಕಾವೇರಿ ನದೀ ಮುಖಜ ಭೂಮಿಯಲ್ಲಿ ಕೇವಲ 14,000 ಹೆಕ್ಟೇರ್ ಮಾತ್ರ ಬೆಳೆ ಸಾಧ್ಯವಾಗಿದೆ. ಇದಕ್ಕೆ ಕಾರಣ ಕರ್ನಾಟಕ ನೀರು ಬಿಡಲು ನಿರಾಕರಿಸಿರುವುದು ಎಂದು ಮಾಜಿ ಮುಖ್ಯಮಂತ್ರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾನು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನದಿ ಪ್ರಾಧಿಕಾರ ಸಭೆಯಲ್ಲಿ ಈ ವಿಚಾರವನ್ನೆತ್ತಿದ್ದೆ. ತಮಿಳುನಾಡು ಕುರುವೈ ಬೆಳೆಯನ್ನು ಬಿಟ್ಟು, ಸಾಂಬಾ (ದೀರ್ಘಾವಧಿ) ಬೆಳೆಗೆ ಅಂಟಿಕೊಳ್ಳಬೇಕು ಎಂದು ಕರ್ನಾಟಕ ಇದಕ್ಕೆ ಉತ್ತರಿಸಿತ್ತು. ಇದು ಕರುಣಾನಿಧಿಯವರಿಗೂ ತಿಳಿದಿದೆ. ಅದೇ ಕಾರಣಕ್ಕಾಗಿ ಅವರು ಬಾಯ್ಮುಚ್ಚಿ ಕುಳಿತಿದ್ದಾರೆ. ಆದರೆ ಇದು ಕರ್ನಾಟಕಕ್ಕೆ ಅವರು ಶರಣಾಗಿರುವ ಸಂಶಯ ಹುಟ್ಟಿಸುತ್ತಿದೆ ಎಂದು ಡಿಎಂಕೆ ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ ಮಾಡಿದರು.

ಕಾವೇರಿ ಜಲ ವಿವಾದ ನ್ಯಾಯಾಧೀಕರಣ (ಸಿಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ಪ್ರಕಾರ ತಮಿಳುನಾಡಿಗೆ ಕರ್ನಾಟಕವು ಪ್ರತಿವರ್ಷ 192 ಟಿಎಂಸಿ ನೀರನ್ನು ಹಾಯಿಸಬೇಕು. ಅದರಂತೆ ಕರ್ನಾಟಕವು ಕುರುವೈ ಬೆಳೆಗಾಗಿ ಜುಲೈಯಲ್ಲಿ 34 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ ಇದುವರೆಗೂ ಅದನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಅಂಕಿ-ಅಂಶ ಸಹಿತ ವಿವರಣೆ ನೀಡಿದ್ದಾರೆ.

ರಾಜ್ಯ ಸರಕಾರವು ಇದೇ ರೀತಿ ತನ್ನ ಮೌನವನ್ನು ಮುಂದುವರಿಸಿದಲ್ಲಿ ಮುಂದೊಂದು ದಿನ ಅನಾಹುತವೇ ಎದುರಾಗಬಹುದು. ತಮಿಳುನಾಡು ಹಲವು ಸಮಯದಿಂದ ನೀರಿಗಾಗಿ ಮನವಿಯನ್ನೇ ಮಾಡಿಲ್ಲ ಎಂದು ಕರ್ನಾಟಕ ಹೇಳಬಹುದು. ಪರಿಣಾಮ ಈ ವಿವಾದದಲ್ಲಿ ರಾಜ್ಯವು ತನ್ನ ಅಧಿಕಾರವನ್ನೇ ಕಳೆದುಕೊಳ್ಳಬಹುದು ಎಂದೂ ಜಯಲಲಿತಾ ಭೀತಿ ವ್ಯಕ್ತಪಡಿಸಿದ್ದಾರೆ.

ಅದೇ ಹೊತ್ತಿಗೆ ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧವೂ ಜಯಲಲಿತಾ ಪ್ರಹಾರ ನಡೆಸಿದ್ದಾರೆ. ಅವರು ತಮಿಳು ಸಮ್ಮೇಳನಕ್ಕೆ ಪೂರಕ ವ್ಯವಸ್ಥೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅದರ ಬದಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ, ನೀರು ಬಿಡುವಂತೆ ಒತ್ತಾಯಿಸಬಹುದಿತ್ತು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ