ತಾನು ಚಪ್ಪಲಿ ತೊಟ್ಟ ಭಾವಚಿತ್ರವನ್ನು ಅನುಮತಿಯಿಲ್ಲದೆ ಜಾಹೀರಾತೊಂದರಲ್ಲಿ ಬಳಸಿಕೊಂಡ ಕಂಪನಿಯ ಮೇಲೆ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಕೇಸು ಜಡಿದಿದ್ದಾರೆ.
ತಾನು ತಯಾರಿಸಿದ ರಬ್ಬರ್ ಸ್ಲಿಪ್ಪರ್‌ಗಳನ್ನು ಮಮತಾ ತೊಟ್ಟಿದ್ದಾರೆಂದು ಚಿತ್ರಸಹಿತ ಜಾಹೀರಾತನ್ನು 'ಅಜಂತಾ ಕಂಪನಿ' ಕೊಲ್ಕತ್ತಾ ಮೂಲದ ಬೆಂಗಾಲಿ ಪತ್ರಿಕೆ 'ಸಾಂಬಾದ್ ಪ್ರತಿದಿನ್' ಪತ್ರಿಕೆಯಲ್ಲಿ ಜೂನ್ 21ರಂದು ಪ್ರಕಟಿಸಿತ್ತು.
ಅಜಂತಾ ಕಂಪನಿ ವಿರುದ್ಧ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ರೈಲ್ವೇ ಇಲಾಖೆಯು ಎಫ್ಐಆರ್ ದಾಖಲಿಸಿದೆ. ಸಂಪುಟ ಸಚಿವರ ಗಮನಕ್ಕೆ ತರದೆ ಮತ್ತು ಅನುಮತಿಯಿಲ್ಲದೆ ಈ ಚಿತ್ರವನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿತ್ತು ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವೆಯ ಪರವಾಗಿ ರೈಲ್ವೇ ಇಲಾಖೆ ಅಧಿಕಾರಿ ಜೂನ್ 22ರಂದು ಈ ಪ್ರಕರಣ ದಾಖಲಿಸಿದ್ದಾರೆ. ಜಾಹೀರಾತಿನ ಬಗ್ಗೆ ಮಮತಾ ತೀವ್ರ ಅಸಮಾಧಾನಗೊಂಡಿದ್ದಾರೆ. ಅವರ ಘನತೆಯನ್ನು ಮಣ್ಣುಪಾಲು ಮಾಡುವ ಮೂಲಕ ಹಣ ಗಳಿಸುವ ಯತ್ನ ಇದರಲ್ಲಿ ಅಡಗಿದೆ ಎಂದು ಅಧಿಕಾರಿ ವಿವರಣೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆಗಿದ್ದ ತನ್ನ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಬಿಜೆಪಿ ಜತೆ ಮುನಿಸಿಕೊಂಡಿದ್ದರು. ಅದರ ನಂತರ ಇದೀಗ ಮಮತಾ ಸರದಿ.