ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಂ ಆಗಿದ್ದಕ್ಕೆ ಹೀಗೆ ಮಾಡಿದ್ರಾ?: ಭಾರತೀಯನ ಪ್ರಶ್ನೆ
(Indian biologist | US visa | Muslim biologist | Dr Faiyaz Khudsar)
ಮುಸ್ಲಿಂ ಆಗಿದ್ದಕ್ಕೆ ಹೀಗೆ ಮಾಡಿದ್ರಾ?: ಭಾರತೀಯನ ಪ್ರಶ್ನೆ
ನವದೆಹಲಿ, ಶನಿವಾರ, 26 ಜೂನ್ 2010( 20:55 IST )
ಅಧ್ಯಯನಕ್ಕಾಗಿ ವರ್ಜೀನಿಯಾಕ್ಕೆ ತೆರಳಬೇಕಾಗಿದ್ದ ಮುಸ್ಲಿಂ ವಿಜ್ಞಾನಿಯೊಬ್ಬರು ತೀವ್ರ ನಿರಾಸೆಗೊಳಗಾಗಿದ್ದಾರೆ. ಅಮೆರಿಕಾ ರಾಜತಾಂತ್ರಿಕರ ಬಗ್ಗೆ ಅಸಮಾಧಾನವೂ ಉಂಟಾಗಿದೆ. ಕಾರಣ ಅವರಿಗೆ ವೀಸಾ ನಿರಾಕರಿಸಿರುವುದು. ನನಗೆ ವೀಸಾ ಯಾಕೆ ನೀಡಿಲ್ಲ ಎಂದು ವಿವರಣೆ ನೀಡಬೇಕು ಎಂದು ಅವರೀಗ ಅಮೆರಿಕಾ ರಾಯಭಾರ ಕಚೇರಿಗೆ ಆಗ್ರಹಿಸಿದ್ದಾರೆ.
ನನಗೆ ವೀಸಾ ನಿರಾಕರಿಸಿರುವುದು ಅಚ್ಚರಿ ತಂದಿದೆ. ಇದರ ಹಿಂದೆ ಯಾವ ಕಾರಣಗಳಿವೆ ಎಂಬುದು ನನಗೆ ತಿಳಿದಿಲ್ಲ. ಬಹುಶಃ ಅದು ನನ್ನ ಹೆಸರು ಅಥವಾ ಧರ್ಮದ ಕಾರಣವಿರಬಹುದು - ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ಪ್ರವಾಸವು ಬಹುಮುಖ್ಯವಾಗಿತ್ತು, ಅದೇನೂ ಮೋಜಿನ ಪ್ರವಾಸವಾಗಿರಲಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞ ಡಾ. ಫಯಾಜ್ ಖುದ್ಸಾರ್ ಟಿವಿ ಚಾನೆಲ್‌ವೊಂದರ ಜತೆ ಹೇಳಿಕೊಂಡಿದ್ದಾರೆ.
ವನ್ಯಜೀವಿ ಜೀವಶಾಸ್ತ್ರಜ್ಞರಾಗಿರುವ ಫಯಾಜ್ ದೆಹಲಿ ಯುನಿವರ್ಸಿಟಿಯಲ್ಲಿ ಜೀವ ವೈವಿಧ್ಯತೆಯ ಉದ್ಯಾನ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇತರ 10 ಮಂದಿಯೊಂದಿಗೆ ಜೂನ್ 1ರಂದು ವರ್ಜೀನಿಯಾದ ಸ್ಮಿತ್‌ಸೋನಿಯನ್ ಇನ್ಸ್‌ಟಿಟ್ಯೂಟ್‌ಗೆ ತರಬೇತಿಗೆಂದು ತೆರಳಬೇಕಿತ್ತು.
ತರಬೇತಿಗಾಗಿ ಭಾರತದಿಂದ ಆಯ್ಕೆಯಾಗಿದ್ದ 11 ಮಂದಿ ಜತೆಯಾಗಿ ದೆಹಲಿಯ ಅಮೆರಿಕಾ ರಾಯಭಾರಿ ತಿಮೋತಿ ರೋಮರ್ ಅವರಿಗೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಫಯಾಜ್ ಹೊರತುಪಡಿಸಿ ಉಳಿದೆಲ್ಲರಿಗೂ ಅಮೆರಿಕಾ ವೀಸಾ ನೀಡಿತ್ತು.
ಅಮೆರಿಕಾ ರಾಯಭಾರ ಕಚೇರಿಯು ನನ್ನ ಸಂದರ್ಶನ ನಡೆಸಿತ್ತು. ನನಗೆ ಜೂನ್ 1ರಂದು ವಿಮಾನದಲ್ಲಿ ಹೋಗಲೇಬೇಕಾದ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಅವರಿಗೆ ಮನದಟ್ಟು ಮಾಡಿದ್ದೆ. ಖಂಡಿತಾ ನಿಮ್ಮ ಪ್ರಯಾಣದ ಮೊದಲು ನಾವು ವೀಸಾ ಒದಗಿಸುತ್ತೇವೆ ಎಂದಿದ್ದರು. ದುರದೃಷ್ಟಕರವೆಂದರೆ ಅದು ಸಾಧ್ಯವಾಗದೇ ಇರುವುದು. ಈ ಕುರಿತು ನಾನು ಮೇ 20ರಂದು ಮತ್ತೆ ಅವರಿಗೆ ನೆನಪಿಸಿದ್ದೆ. ಆದರೆ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಬದಲಿಗೆ ಜೂನ್ 20ರಂದು ನನ್ನ ಪಾಸ್‌ಪೋರ್ಟನ್ನು ವೀಸಾ ರಹಿತವಾಗಿ ವಾಪಾಸ್ ಮಾಡಲಾಗಿದೆ ಎಂದು ಫಯಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿ ಅಧ್ಯಯನದಲ್ಲಿ 15 ವರ್ಷಗಳ ಅನುಭವ ಹೊಂದಿರುವ ಫಯಾಜ್ ಇದೀಗ ವಿದೇಶಾಂಗ ಸಚಿವಾಲಯ, ಪರಿಸರ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ವೀಸಾ ನಿರಾಕರಿಸಿರುವ ಕಾರಣವೇನು ಎಂದೂ ಅವರು ಪ್ರಶ್ನಿಸಿದ್ದಾರೆ.