ನಿನ್ನೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆದ ಬೆನ್ನಿಗೆ ಇಂದು ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಜತೆ ಇಸ್ಲಾಮಾಬಾದ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮುಂಬೈ ದಾಳಿಯ ನಂತರ ಸಚಿವರೊಬ್ಬರು ಮೊತ್ತ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದು, ಭಯೋತ್ಪಾದನೆಯೇ ಪ್ರಮುಖ ಅಜೆಂಡಾ ಎಂದು ಭಾರತ ಹೇಳಿಕೊಂಡಿದೆ.
ತನ್ನ ಎರಡು ದಿನಗಳ ಪಾಕ್ ಪ್ರವಾಸದಲ್ಲಿ ಅವರು ಮುಂಬೈ ದಾಳಿ ರೂವಾರಿಗಳ ಧ್ವನಿ ಮಾದರಿ ಮತ್ತು ಲಷ್ಕರ್ ಇ ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಶನಿವಾರ ನಡೆಯಲಿರುವ ಸಾರ್ಕ್ ಆಂತರಿಕ ಸಚಿವರುಗಳ ಸಮ್ಮೇಳನಕ್ಕಾಗಿ ಚಿದಂಬರಂ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಈ ನಡುವೆ ಪಾಕ್ ಸಚಿವರುಗಳ ಜತೆಗೂ ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಪಾಕಿಸ್ತಾನದ ನೆಲದಿಂದ ಪ್ರಚೋದಿಸಲ್ಪಡುತ್ತಿರುವ ಭಯೋತ್ಪಾದನೆಯ ಕುರಿತು ಮಾತುಕತೆ ಕೇಂದ್ರೀಕೃತಗೊಳ್ಳಲಿದ್ದು, ಅದನ್ನು ಕೊನೆಗಾಣಿಸಲು ಭಾರತ ಬಯಸುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ಗೃಹ ಸಚಿವರು ಪಾಕಿಸ್ತಾನಿ ಆಂತರಿಕ ಸಚಿವರಲ್ಲಿ ಅರುಹಲಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣವು ಪಾಕಿಸ್ತಾನದಲ್ಲಿ ಯಾವ ಹಂತದಲ್ಲಿ ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನೂ ಚಿದಂಬರಂ ಈ ಸಂದರ್ಭದಲ್ಲಿ ಅಪೇಕ್ಷಿಸಲಿದ್ದಾರೆ.
ಅಲ್ಲದೆ ಮುಂಬೈ ದಾಳಿ ಪ್ರಕರಣ ಸಂಬಂಧ ಕೆಲವು ತಿಂಗಳುಗಳ ಹಿಂದಷ್ಟೇ ಭಾರತ ಹಸ್ತಾಂತರಿಸಿರುವ ಸಯೀದ್ ಮತ್ತು ಇತರರ ವಿರುದ್ಧದ 10 ಸಾಕ್ಷ್ಯಗಳ ಗತಿಯೇನಾಗಿದೆ ಎಂಬ ಕುರಿತೂ ಸಚಿವರು ವಿವರಣೆ ಪಡೆಯಲಿದ್ದಾರೆ.
ನಿನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳಾದ ನಿರುಪಮಾ ರಾವ್ ಮತ್ತು ಸಲ್ಮಾನ್ ಬಶೀರ್ ಪಾಕ್ ರಾಜಧಾನಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನವು ಕಾಶ್ಮೀರ ವಿಚಾರವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿತ್ತು ಎಂದು ವರದಿಗಳು ಹೇಳಿದ್ದವು. ಹಾಗಾಗಿ ಇಂದಿನ ಮಾತುಕತೆ ಎಷ್ಟು ಫಲಪ್ರದವಾಗಲಿದೆ ಎಂಬುದು ನಿರೀಕ್ಷೆ ಹುಟ್ಟಿಸಿದೆ.