ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಿನ್ನಾ ಕುರಿತ ಜಸ್ವಂತ್ ನಿಲುವನ್ನು ಬಿಜೆಪಿ ಒಪ್ಪಿತೇ?: ಕಾಂಗ್ರೆಸ್ (BJP | Congress | Jaswant Singh | Manish Tiwari)
Bookmark and Share Feedback Print
 
ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಹೊಗಳಿ ಅಟ್ಟಕ್ಕೇರಿಸಿದ್ದಕ್ಕಾಗಿ ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಹೊರ ದಬ್ಬಿ ಇದೀಗ ಮರಳಿ ಸೇರಿಸಿಕೊಂಡ ಬಿಜೆಪಿಗೆ ಕಾಂಗ್ರೆಸ್ ಎಸೆದಿರುವ ಪ್ರಶ್ನೆಯಿದು.

ಜಸ್ವಂತ್ ಸಿಂಗ್‌ರ ಜಿನ್ನಾ ಸ್ತುತಿಯನ್ನು ಬಿಜೆಪಿ ಈಗ ಸಮರ್ಥಿಸಿಕೊಳ್ಳುತ್ತದೆಯೇ? ಜಸ್ವಂತ್ ಪುಸ್ತಕವನ್ನು ಗುಜರಾತಿನಲ್ಲಿ ನಿಷೇಧಿಸಿದ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಈಗ ಕ್ರಮ ಕೈಗೊಳ್ಳುತ್ತದೆಯೇ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ಸಂಸ್ಥಾಪಕರ ಕುರಿತ ಮೆಚ್ಚುಗೆಯ ಕುರಿತು ವಿಷಾದವನ್ನೂ ವ್ಯಕ್ತಪಡಿಸದ ಸಿಂಗ್‌ರನ್ನು ಬಿಜೆಪಿ ಮರಳಿ ಸೇರಿಸಿಕೊಂಡಿರುವುದು ಅಚ್ಚರಿ ತಂದಿದೆ. ಹಾಗಾದರೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾದರೂ ಯಾವ ಪುರುಷಾರ್ಥಕ್ಕೆ? ನೆಹರೂ ಅವರನ್ನು ಗೌರವಿಸದ ವಿರೋಧ ಪಕ್ಷವು ಜಿನ್ನಾರನ್ನು ಶ್ಲಾಘಿಸಿದ ಸಿಂಗ್ ಜತೆ ರಾಜಿಗೆ ಮುಂದಾಗಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ವಿಶ್ಲೇಷಿಸಿದರು.

ಅದೇ ಹೊತ್ತಿಗೆ ಆರೆಸ್ಸೆಸ್‌ನತ್ತಲೂ ಕಾಂಗ್ರೆಸ್ ನೈತಿಕ ಪ್ರಶ್ನೆಗಳನ್ನೆಸೆದಿದೆ. 'ಭಾರತ ವಿಭಜನೆಗೆ ಕಾರಣರಾದ ಜಿನ್ನಾರನ್ನು ಆರೆಸ್ಸೆಸ್ ಬಹುವಾಗಿ ಪ್ರೀತಿಸುತ್ತಿರುವುದು ಆಶ್ಚರ್ಯ ತರುತ್ತಿದೆ. ಅತ್ತ ಭಾರತದ ನಿರ್ಮಾತೃ ಜವಾಹರ್‌ಲಾಲ್ ನೆಹರೂರನ್ನು ಕಟುವಾಗಿ ದ್ವೇಷಿಸುತ್ತಿದೆ' ಎಂದು ತಿವಾರಿ ಕುಟುಕಿದ್ದಾರೆ.

ಬಿಜೆಪಿ ಈಗ ಒಂದು ರೀತಿಯಲ್ಲಿ ಹೊಟೇಲೊಂದರ ತಿರುಗುವ ಬಾಗಿಲಿನಂತಾಗಿದೆ. ಅದು ಒಂದು ಬಾರಿ ತನ್ನವರನ್ನು ಹೊರಗೆ ಹಾಕುತ್ತದೆ, ನಂತರ ಅವರನ್ನೇ ಮತ್ತೆ ಒಳ ಬರಲು ಅವಕಾಶ ನೀಡುತ್ತಿದೆ. ಇದು ಅವರ ಆಂತರಿಕ ವಿಚಾರವಾಗಿದ್ದರೂ, ಬಿಜೆಪಿಯು ಜಿನ್ನಾ ಕುರಿತ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಆಗ್ರಹಿಸಿದರು.

ಭಾರತ ವಿಭಜನೆಗೆ ಜವಾಹರ್‌ಲಾಲ್ ನೆಹರೂ ಮತ್ತು ಸರ್ದಾರ್ ಪಟೇಲ್ ಕಾರಣ ಎಂದು ತನ್ನ ಪುಸ್ತಕದಲ್ಲಿ ಬರೆದಿದ್ದ ಜಸ್ವಂತ್ ಸಿಂಗ್, ಜಿನ್ನಾರನ್ನು ಜಾತ್ಯತೀತವಾದಿ ಎನ್ನುವ ಮೂಲಕ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಹೊರ ದಬ್ಬಿಸಿಕೊಂಡಿದ್ದರು. ಅವರನ್ನು ನಿನ್ನೆಯಷ್ಟೇ ಬಿಜೆಪಿ ಮರಳಿ ಸೇರಿಸಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ