ನಕ್ಸಲ್ ಸಮಸ್ಯೆ ಎಷ್ಟು ಗಂಭೀರ ಎನ್ನುವುದು ಅಂಕಿ-ಅಂಶಗಳ ಮೂಲಕ ಬಹಿರಂಗವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ಮಾವೋವಾದಿಗಳಿಂದ ನಡೆದ ಹಿಂಸಾಚಾರಗಳಿಗೆ ಒಟ್ಟು 10,268 ಮಂದಿ ಬಲಿಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಅದರ ಪ್ರಕಾರ 2005ರಿಂದ 2010ರ ಮೇ ತಿಂಗಳ ನಡುವೆ ಮೇಲೆ ತಿಳಿಸಿದಷ್ಟು ಜನ ನಕ್ಸಲರಿಗೆ ಬಲಿಯಾಗಿದ್ದಾರೆ. 2009ರಲ್ಲಿ 2,372, 2008ರಲ್ಲಿ 1,769 ಹಾಗೂ 2007ರಲ್ಲಿ 1,737 ಮಂದಿಯನ್ನು ಮಾವೋವಾದಿಗಳು ಕೊಂದಿದ್ದಾರೆ.
2006ರಲ್ಲಿ 1,999, 2005ರಲ್ಲಿ 1,952 ಹಾಗೂ 2010ರ ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ 439 ಮಂದಿ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಕ್ಸಲರು ಆಹುತಿಯಾಗಿ ತೆಗೆದುಕೊಂಡಿದ್ದಾರೆ.
2008ರ ಜುಲೈ 16ರಂದು ಒರಿಸ್ಸಾದ ಮಲ್ಕಾಂಗಿರಿ ಜಿಲ್ಲೆಯಲ್ಲಿ ನಡೆದ ನೆಲಬಾಂಬ್ ಸ್ಫೋಟದಿಂದ 21 ಮಂದಿ, ಈ ವರ್ಷದ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಲದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸಿಲ್ದಾ ಭದ್ರತಾ ಪಡೆಗಳ ಶಿಬಿರದ ಮೇಲಿನ ದಾಳಿಯಿಂದ 24 ಸಿಬ್ಬಂದಿಗಳು ಸಾವನ್ನಪ್ಪಿದ್ದರು.
ಏಪ್ರಿಲ್ ನಾಲ್ಕರಂದು ಒರಿಸ್ಸಾದ ಕೊರಾಪತ್ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಚರಣೆ ಪಡೆಯ ಮೇಲೆ ಮಾವೋವಾದಿಗಳು ದಾಳಿ ಮಾಡಿ 11 ಮಂದಿಯನ್ನು ಹತ್ಯೆಗೈದಿದ್ದರು, ಏಪ್ರಿಲ್ ಆರರಂದು ಛತ್ತೀಸ್‌ಗಢದ ದಂತೇವಾಡದಲ್ಲಿ ನಡೆದ ಮಾರಣಹೋಮದಲ್ಲಿ 76 ಭದ್ರತಾ ಸಿಬ್ಬಂದಿಗಳನ್ನು ನಕ್ಸಲರು ಬಲಿ ಪಡೆದುಕೊಂಡಿದ್ದರು ಎಂದು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸರಕಾರವು ಮಾಹಿತಿ ನೀಡಿದೆ.
ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲ -- ಈ ಒಂಬತ್ತು ರಾಜ್ಯಗಳ 83 ಜಿಲ್ಲೆಗಳು ನಕ್ಸಲ್ ಬಾಧಿತ ಎಂದು ಗುರುತಿಸಲಾಗಿದೆ ಎಂದೂ ಸರಕಾರ ತಿಳಿಸಿದೆ.