ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಿಸಿರುವುದು ಜನಸಾಮಾನ್ಯರ ಕೊಲೆ, ತಕ್ಷಣವೇ ವಾಪಸ್ ಪಡೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸರಕಾರದ ನಡೆಯನ್ನು ಆಡಳಿತ ಮೈತ್ರಿಕೂಟದ ಮಮತಾ ಬ್ಯಾನರ್ಜಿ ಕೂಡ ವಿರೋಧಿಸಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ 'ಇದು ಅನಿವಾರ್ಯವಾಗಿತ್ತು' ಎಂದು ಸಮರ್ಥಿಸಿಕೊಂಡಿದೆ.
ಪ್ರತಿ ಲೀಟರ್ ಪೆಟ್ರೋಲ್‌ಗೆ 3.73, ಡೀಸೆಲ್‌ಗೆ 2, ಸೀಮೆಎಣ್ಣೆಗೆ 3 ಹಾಗೂ ಅಡುಗೆ ಅನಿಲ ಸಿಲಿಂಡರ್ ಮೇಲೆ 35 ರೂಪಾಯಿಗಳನ್ನು ಹೆಚ್ಚಳ ಮಾಡಿದ್ದನ್ನು ಇಂದು ಪೆಟ್ರೋಲಿಯಂ ಸಚಿವಾಲಯವು ಪ್ರಕಟಿಸಿತ್ತು.
ಇದು ಜನಸಾಮಾನ್ಯರ ಕೊಲೆ: ಬಿಜೆಪಿ ಸರಕಾರದ ನಿರ್ಧಾರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶುಕ್ರವಾರ ಏರಿಸಲಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ದರವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ನಂತರ ಸರಕಾರವು ಜನತೆಯ ನಂಬಿಕೆಯನ್ನು ಲೇವಡಿ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡಕರ್ ಪ್ರತಿಕ್ರಿಯಿಸಿದ್ದಾರೆ.
ಜನತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುತ್ತಾ, ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರಕಾರದ ನಡೆಯನ್ನು ನೋಡಿದರೆ ಅದು ಜನಸಾಮಾನ್ಯರನ್ನು ಮುಗಿಸಲು ಹೊರಟಂತಿದೆ ಎಂದು ಬಿಜೆಪಿ ಖಾರವಾಗಿ ಹೇಳಿಕೆ ನೀಡಿದ್ದು, ದರಯೇರಿಕೆ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದೆ.
ನನಗೂ ಅಸಮಾಧಾನ: ಮಮತಾ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳ ಮಾಡಿರುವುದು ನನಗೂ ಸಮಾಧಾನ ತಂದಿಲ್ಲ ಎಂದು ಯುಪಿಎ ಮೈತ್ರಿಕೂಟದ ಪಾಲುದಾರ ಪಕ್ಷ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಮಾಡಿರುವ ಸರಕಾರದ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಈ ಕುರಿತು ಮರು ಪರಿಶೀಲನೆ ನಡೆಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ದರಯೇರಿಕೆ ಪ್ರಕಟಿಸಿದ ಬೆನ್ನಿಗೆ ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದು ಮೈತ್ರಿ ಪಕ್ಷ ಡಿಎಂಕೆ ಕೂಡ ಬೆಲೆಯೇರಿಕೆಯನ್ನು ತೀವ್ರವಾಗಿ ವಿರೋಧಿಸಿದೆ. ಡೀಸೆಲ್ ದರ ಏರಿಕೆ ಮಾಡಿರುವುದು ಗಂಭೀರ ವಿಚಾರವಾಗಿದ್ದು, ಇದು ಜನ ಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸರಕಾರಕ್ಕೆ ಅನಿವಾರ್ಯವಾಗಿತ್ತು: ಕಾಂಗ್ರೆಸ್ ನಾವು ಯಾವತ್ತೂ ಜನ ಸಾಮಾನ್ಯರ ಕಲ್ಯಾಣದ ಕುರಿತು ಕಾಳಜಿಯುಳ್ಳವರು. ಸರಕಾರವು ತೆಗೆದುಕೊಳ್ಳುವ ಆರ್ಥಿಕ ನೀತಿಗಳಿಂದ ಜನ ಜೀವನದ ಮೇಲಾಗುವ ಪರಿಣಾಮಗಳ ಬಗ್ಗೆ ನಮಗೆ ಅರಿವಿದೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.
ಆದರೂ ಸರಕಾರಕ್ಕಿದು ಅನಿವಾರ್ಯವಾಗಿತ್ತು. ಇಂತಹ ನಿರ್ಧಾರ ತೆಗೆದುಕೊಳ್ಳದೆ ಅದಕ್ಕೆ ಬೇರೆ ದಾರಿಯಿರಲಿಲ್ಲ ಎಂದು ಅವರು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.