ಇಂಧನ ದರದಲ್ಲಿ ಏರಿಕೆ ಮಾಡಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಪ್ರತಿಪಕ್ಷಗಳು ದೇಶದದ್ಯಾಂತ ಪ್ರತಿಭಟನೆಯನ್ನು ಕೈಗೊಳ್ಳಲು ನಿರ್ಧರಿಸಿವೆ.
ಇಂಧನ ಬೆಲೆ ಏರಿಕೆ ನೀತಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಶನಿವಾರ ಮತ್ತು ಭಾನುವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಈ ಕುರಿತಂತೆ ಬಿಜೆಪಿ ಅಧ್ಯಕ್ಷ ನಿತಿತ್ ಗಡ್ಕರಿ ಸೂಚನೆ ನೀಡಿದ್ದಾರೆಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಎಡಪಂಥೀಯ ಪಕ್ಷಗಳು ಕೂಡಾ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಇಂದು (ಶನಿವಾರ) ಬಂದ್ ಘೋಷಿಸಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಡವರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಹೋಗಿರುವ ಜನರಿಗೆ ತೈಲ ಉತ್ಪನ್ನಗಳ ಬೆಲೆ ಹೆಚ್ಚಳಗೊಳಿಸುವ ಮೂಲಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಆರೋಪಿಸಿವೆ.
ಅದೇ ವೇಳೆ ಕೇಂದ್ರ ಸರಕಾರಕ್ಕೆ ಬೆಂಬಲ ನೀಡುತ್ತಿರುವ ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಮತ್ತು ಡಿಎಂಕೆ ಕೂಡಾ ಇಂಧನ ಬೆಲೆಯೇರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.
ಶುಕ್ರವಾರವಷ್ಟೇ ಕೇಂದ್ರ ಸರಕಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 3.73 ರೂಪಾಯಿ, ಡೀಸೆಲ್ 2 ರೂಪಾಯಿ, ಅನಿಲ ಸಿಲಿಂಡರ್ 35 ರೂಪಾಯಿಗಳ ಏರಿಕೆ ಘೋಷಿಸಿತ್ತು. ಅದೇ ರೀತಿ ಸೀಮೆಎಣ್ಣೆ ದರದಲ್ಲಿ 3 ರೂಪಾಯಿ ಹೆಚ್ಚಳ ಮಾಡಲಾಗಿತ್ತು.