ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೈಕೊಟ್ಟ ಪ್ರಿಯಕರ; ಕಾಮಸೂತ್ರ ಕಾಂಡೋಂ ನಟಿ ಆತ್ಮಹತ್ಯೆ (Kamasutra model | Viveka Babajee | Indian supermodel | India)
Bookmark and Share Feedback Print
 
ಕಾಮಸೂತ್ರ ಕಾಂಡೋಮ್ ಜಾಹೀರಾತುಗಳಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ವಿವೇಕಾ ಬಾಬಾಜೀ ಎಂಬ ಭಾರತೀಯ ಸೂಪರ್ ಮಾಡೆಲ್ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಿಯತಮನಿಂದ ಬೇರ್ಪಟ್ಟ ನಂತರ ಖಿನ್ನಳಾಗಿದ್ದ ಆಕೆ ಅದೇ ಕಾರಣದಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ವರದಿಗಳು ಹೇಳಿವೆ.

ಮುಂಬೈಯ ಬಾಂದ್ರಾದಲ್ಲಿ ನೆಲೆಸಿದ್ದ 37ರ ಹರೆಯದ ವಿವೇಕಾ, ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಆಕೆಯ ಕುಟುಂಬದ ಸ್ನೇಹಿತರೊಬ್ಬರು ಖಚಿತಪಡಿಸಿದ್ದಾರೆ.

90ರ ದಶಕದಲ್ಲಿ ಕಾಮಸೂತ್ರ ಕಾಂಡೋಮ್ ಜಾಹೀರಾತಿಗೆ ಇಂದರ್ ಸುದಾನ್ ಎಂಬ ಪುರುಷ ಮಾಡೆಲ್ ಜತೆ ವಿವೇಕಾ ಮಾದಕ ದೃಶ್ಯಗಳಲ್ಲಿ ಕಾಣಿಸಿಕೊಂಡು ಭಾರೀ ವಿವಾದಕ್ಕೂ ತುತ್ತಾಗಿದ್ದವಳು. ನಂತರವೂ ಹತ್ತು-ಹಲವು ಜಾಹೀರಾತುಗಳು, ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಾ ಹೆಸರುವಾಸಿಯಾಗಿದ್ದ ಮಾಡೆಲ್ ಇದೀಗ ಒಮ್ಮಿಂದೊಮ್ಮೆಲೇ ಆತ್ಮಹತ್ಯೆಗೆ ಶರಣಾಗಿರುವುದು ಫ್ಯಾಷನ್ ಜಗತ್ತಿನಲ್ಲಿ ದಿಗ್ಭ್ರಮೆ ಮೂಡಿಸಿದೆ.

ಪ್ರೀತಿಗಾಗಿ ಹುಡುಕಾಟ ನಡೆಸಿದ್ದಳು...
ಬಹುತೇಕ ಮಾಡೆಲ್‌ಗಳು ತಮ್ಮ ಹದಿಹರೆಯದಲ್ಲೇ ಫ್ಯಾಷನ್ ಜಗತ್ತಿಗೆ ಕಾಲಿಟ್ಟಿರುತ್ತಾರೆ. ಎದುರಿಗೆ ಬಣ್ಣದ ಜಗತ್ತನ್ನು ತೋರಿಸುವುದರ ಹಿಂದೆ ಎಷ್ಟು ಹುಳುಕುಗಳು ತುಂಬಿರುತ್ತವೆ, ಬಳಸಿಕೊಳ್ಳುವ ತೋಳುಗಳು ಎಷ್ಟಿರುತ್ತವೆ ಎಂಬುದೂ ಆಗ ತಿಳಿದಿರುವುದಿಲ್ಲ.

ಇವನ್ನೆಲ್ಲ ಚಾಣಾಕ್ಷತೆಯಿಂದ ನಿಭಾಯಿಸಲು ಸಾಧ್ಯವಾಗದೆ ಉಳಿದವರು ಕೊನೆಗೆ ಆಯ್ದುಕೊಳ್ಳುವುದು ಆತ್ಮಹತ್ಯೆ ಎಂಬ ಮಾತೂ ಫ್ಯಾಷನ್ ಜಗತ್ತಿನಲ್ಲಿ ಸಾಮಾನ್ಯ. ಇಲ್ಲಿನ ಗಾಢಾಂಧಕಾರವನ್ನು ಈಗಾಗಲೇ ಹಲವು ಸಿನಿಮಾಗಳು ಕೂಡ ಬಹಿರಂಗಪಡಿಸಿವೆ. ಅದರಂತೆ ವಿವೇಕಾ ಪ್ರಕರಣವೂ ಅಂತ್ಯ ಕಂಡಿದೆ ಎಂದು ಮಾಡೆಲಿಂಗ್ ಲೋಕ ಅಭಿಪ್ರಾಯಪಟ್ಟಿದೆ.

ಮೂಲಗಳ ಪ್ರಕಾರ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ವಿವೇಕಾ ಕೆಲ ವರ್ಷಗಳ ಹಿಂದೆ ಕಥೆಗಾರ-ನಿರ್ದೇಶಕ ರೋಹಿತ್ ಜುಗ್ರಾಜ್ ಜತೆ ಸಂಬಂಧ ಹೊಂದಿದ್ದಳು. ಅದು ಕಳೆದ ವರ್ಷವಷ್ಟೇ ಅಂತ್ಯಕಂಡಿತ್ತು.

ವಿವೇಕಾ ಮತ್ತೆ ಪ್ರೀತಿಗಾಗಿ ಹುಡುಕಾಟ ನಡೆಸಿದ್ದಳು. ಆ ಹೊತ್ತಿಗೆ ಸಿಕ್ಕವನೇ ಗೌತಮ್. ಈತನ ಜತೆ ಸಿಕ್ಕಸಿಕ್ಕಲ್ಲೆಲ್ಲಾ ಸುತ್ತುತ್ತಿದ್ದಳು ಎಂದು ಹೇಳಲಾಗುತ್ತಿದೆಯಾದರೂ, ಗೌತಮ್ ಯಾರೆಂಬುದು ಇನ್ನೂ ಬಹಿರಂಗವಾಗಿಲ್ಲ.

ಮೂಲಗಳ ಪ್ರಕಾರ ವಿವೇಕಾ ಆತ್ಮಹತ್ಯೆಗೆ ಗೌತಮ್ ಪರೋಕ್ಷ ಕಾರಣ. ಸಾಯುವ ಮೊದಲು ಬರೆದಿರುವ ಪತ್ರದಲ್ಲೂ ವಿವೇಕಾ ಇದನ್ನು ನಮೂದಿಸಿದ್ದಾಳೆ ಎಂದು ವರದಿಗಳು ಹೇಳಿವೆ.

ಮಾರಿಷಸ್ ಸಂಜಾತೆಯಾಗಿರುವ ವಿವೇಕಾ 1993ರಲ್ಲಿ ಮಿಸ್ ಮಾರಿಷಸ್ ಕಿರೀಟ ತೊಟ್ಟುಕೊಂಡು ಭುವನ ಸುಂದರಿ ಸ್ಪರ್ಧೆಯಲ್ಲಿ ಆ ದೇಶವನ್ನು ಪ್ರತಿನಿಧಿಸಿದ್ದಳು. ನಂತರ ಭಾರತಕ್ಕೆ ಬಂದಿದ್ದ ಆಕೆ 'ವಿಬ್ಗ್ಯಾರ್ ಎಂಟರ್ಟೈನ್ಮೆಂಟ್' ಎಂಬ ಸಂಸ್ಥೆಯೊಂದನ್ನೂ ನಡೆಸುತ್ತಿದ್ದಳು.

2002ರಲ್ಲಿ 'ಯೆ ಕೈಸಿ ಮೊಹಬ್ಬತ್' ಎಂಬ ಬಿ-ಗ್ರೇಡ್ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದ ವಿವೇಕಾ, ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಳು.

ಆಪ್ತ ಸ್ನೇಹಿತರ ಪ್ರಕಾರ ವಿವೇಕಾಳ ಖಾಸಗಿ ಜೀವನ ಸುಖಕರವಾಗಿರಲಿಲ್ಲ. ಕಳೆದೊಂದು ತಿಂಗಳಿನಿಂದಷ್ಟೇ ಆಕೆ ಗೌತಮ್ ಜತೆ ಡೇಟಿಂಗ್ ನಡೆಸುತ್ತಿರುವುದು ಗೆಳೆಯರ ಗಮನಕ್ಕೆ ಬಂದಿತ್ತು. ಆದರೆ ಅಲ್ಪಾವಧಿಯಲ್ಲಿ ಈ ಸಂಬಂಧದಲ್ಲಿ ಬಿರುಕುಂಟಾಯಿತೇ ಎಂದು ಅವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಗಿಲು ತೆರೆಯದೇ ಇದ್ದುದನ್ನು ಕಂಡ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ