ಹೆಂಡ್ತಿಗೆ ಮನೆ ಕೊಡಿ, ಇಲ್ಲಾಂದ್ರೆ ಜೈಲಿಗೆ ಹೋಗಿ: ಕೋರ್ಟ್
ನವದೆಹಲಿ, ಶನಿವಾರ, 26 ಜೂನ್ 2010( 13:42 IST )
ಅತ್ತೆ-ಮಾವನಿಂದ ಪ್ರತ್ಯೇಕವಾಗಿ ವಾಸಿಸಲು ಹೆಂಡತಿಗೆ ಮನೆ ಖರೀದಿಸಿಕೊಡಲು ತಪ್ಪಿದಲ್ಲಿ ಜೈಲಿಗೆ ಹೋಗಲು ಸಿದ್ಧರಾಗಿ -- ಹೀಗೆಂದು ಹೇಳಿರುವುದು ದೆಹಲಿ ಉಚ್ಚ ನ್ಯಾಯಾಲಯ. ಗಂಡನೊಬ್ಬ ಪತ್ನಿಗೆ ಪ್ರತ್ಯೇಕ ಮನೆ ಖರೀದಿಸಿಕೊಡುವುದಾಗಿ ಭರವಸೆ ನೀಡಿದ್ದನ್ನು ಪೂರೈಸದೇ ಇದ್ದುದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ರೀತಿಯಿದು.
ಗಂಡ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಸಂಧಾನ ನಡೆಸಿ, ಪ್ರತ್ಯೇಕವಾಗಿ ವಾಸಿಸುವಂತೆ ಹೇಳಿತ್ತು. ಅದರಂತೆ ಪತ್ನಿಗೆ ಪ್ರತ್ಯೇಕವಾಗಿ ವಾಸಿಸಲು ಗಂಡ 18 ಲಕ್ಷ ರೂಪಾಯಿ ಮೌಲ್ಯದ ಮನೆಯೊಂದನ್ನು ಖರೀದಿಸಿ ಕೊಡಬೇಕಾಗಿತ್ತು.
ಪತ್ನಿಗೆ ಹೊಸ ಮನೆಯೊಂದನ್ನು ಖರೀದಿಸುತ್ತೇನೆ ಎಂದು ಗಂಡ ಭರವಸೆ ನೀಡಿದ ನಂತರ ಆತನ ಮೇಲಿದ್ದ ಕ್ರಿಮಿನಲ್ ಕೇಸುಗಳನ್ನು ಪತ್ನಿ ಹಿಂದಕ್ಕೆ ಪಡೆದಿದ್ದಳು. ಆದರೆ ಕೊಟ್ಟ ಮಾತಿನಂತೆ ಗಂಡ ನಡೆದುಕೊಂಡಿರಲಿಲ್ಲ.
ಇದರಿಂದ ಮತ್ತೆ ಪತ್ನಿ ನ್ಯಾಯಾಲಯದ ಮೊರೆ ಹೊಕ್ಕಿದ್ದಳು. ಕುಪಿತಗೊಂಡ ಕೋರ್ಟ್ ಗಂಡನಿಗೆ ನೋಟೀಸ್ ಜಾರಿ ಮಾಡಿದ್ದಲ್ಲದೆ, ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಪೊಲೀಸರಿಗೆ ಸೂಚನೆ ನೀಡಿತು.
ಬೆಚ್ಚಿಬಿದ್ದ ಗಂಡ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್ ನ್ಯಾಯಾಧೀಶರು, ಭರವಸೆಯಂತೆ ಪತ್ನಿಗೆ ಮನೆ ಖರೀದಿಸಿಕೊಡಲು ಸಾಧ್ಯವಾಗದೇ ಇದ್ದರೆ ಜೈಲಿಗೆ ಹೋಗಲು ಸಿದ್ಧರಾಗಬೇಕಾಗುತ್ತದೆ ಎಂದು ಕೆಳಗಿನ ನ್ಯಾಯಾಲದ ತೀರ್ಪನ್ನೇ ಎತ್ತಿ ಹಿಡಿದಿದೆ.
ಪ್ರಸಕ್ತ ನಾನು ಸಂಕಷ್ಟದಲ್ಲಿದ್ದೇನೆ, ಆರ್ಥಿಕ ತೊಂದರೆ ಎದುರಿಸುತ್ತಿದ್ದೇನೆ. ಆದಾಗ್ಯೂ ಪತ್ನಿ 18 ಲಕ್ಷ ರೂಪಾಯಿ ಮೌಲ್ಯದ ಮನೆಯೊಂದನ್ನು ಹುಡುಕಿಕೊಟ್ಟಲ್ಲಿ ನಾನು ಅದನ್ನು ಖರೀದಿಸಿ ಆಕೆಗೆ ಕೊಡಲು ಸಿದ್ಧನಿದ್ದೇನೆ ಎಂದು ಬಡಪಾಯಿ ಗಂಡ ಮತ್ತೆ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಅದಕ್ಕಾಗಿ ಈಗ ಕೋರ್ಟ್ ಆತನಿಗೆ 30 ದಿನಗಳ ಕಾಲಾವಕಾಶ ನೀಡಿದೆ. ಅಷ್ಟರೊಳಗೆ ಪತ್ನಿಗೆ ಮನೆ ಖರೀದಿ ಮಾಡಿಕೊಡುವುದು ಕಡ್ಡಾಯ. ತಪ್ಪಿದಲ್ಲಿ ನೀನು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಅದುವರೆಗೆ ಬಂಧಿಸದಂತೆ ಪೊಲೀಸರಿಗೂ ಸೂಚನೆ ನೀಡಿದೆ.
ಭಂಡ ಗಂಡ ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದು, ಮನೆ ಹುಡುಕಾಟದಲ್ಲಿ ತೊಡಗಿದ್ದಾನೆ.