ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲ್, ಡೀಸೆಲ್ ನೈಜ ಬೆಲೆ ನೀವಂದುಕೊಂಡಷ್ಟಿಲ್ಲ! (Petrol | Diesel | Kerosene | Fuel price hike)
Bookmark and Share Feedback Print
 
ತಮ್ಮದು ಜನಸಾಮಾನ್ಯರ ಪರವಾಗಿರುವ ಸರಕಾರ ಎಂದು ಹೇಳಿಕೊಂಡೇ ಬಂದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಇಂಧನ ದರವನ್ನು ನಿನ್ನೆಯಷ್ಟೇ ಏರಿಸಿ ಮಧ್ಯಮ ವರ್ಗಕ್ಕೆ ಬಿಸಿ ಮುಟ್ಟಿಸಿತ್ತು. ಇದು ಅನಿವಾರ್ಯವಾಗಿತ್ತು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರಗಳೂ ಹೆಚ್ಚಿವೆ ಎಂಬುದು ಸರಕಾರದ ಸಮರ್ಥನೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಚ್ಚಾ ತೈಲವನ್ನು (ಈಗಿನ ದರ ಬ್ಯಾರೆಲ್ ಒಂದಕ್ಕೆ ಅಂದಾಜು 79 ಡಾಲರ್) ಆಮದು ಮಾಡಿಕೊಂಡು ಶುದ್ಧೀಕರಣಗೊಳಿಸಿದ ನಂತರ ಅದನ್ನು ದೇಶದಾದ್ಯಂತ ಪೆಟ್ರೋಲ್ ಬಂಕ್‌ಗಳಿಗೆ ಹಂಚಲಾಗುತ್ತದೆ. ಈ ಹಂತದಲ್ಲಿ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಸರಕಾರದ ಆದೇಶದಂತೆ ಕಡಿಮೆ ದರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ಕಂಪನಿಗಳು ನಷ್ಟದಲ್ಲಿವೆ ಎಂದು ಸರಕಾರ ಹೇಳುತ್ತಿದೆ.

ಅವೆಲ್ಲವನ್ನು ಹೊರತುಪಡಿಸಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲದ ನಿಜವಾದ ಬೆಲೆ ಎಷ್ಟು? ಅವುಗಳಲ್ಲಿ ಸರಕಾರವು ವಿಧಿಸುತ್ತಿರುವ ತೆರಿಗೆಯ ಪಾಲೆಷ್ಟು ಎಂಬ ಕುರಿತು ಇತ್ತೀಚೆಗಷ್ಟೇ ಸರಕಾರವೇ ನೀಡಿದ್ದ ಅಂಕಿ-ಅಂಶಗಳನ್ನು ಆಧರಿಸಿ ವಿವರಣೆ ನೀಡಲಾಗಿದೆ.

ಪೆಟ್ರೋಲ್ ದರ ಕೇವಲ 28 ರೂ.
* ಬೆಂಗಳೂರಿನಲ್ಲಿ ಈ ಹಿಂದೆ ಪ್ರತಿ ಲೀಟರ್ ಪೆಟ್ರೋಲ್‌ಗೆ 43.26 ರೂಪಾಯಿ ದರವಿತ್ತು. ಈಗ ಏರಿಕೆಯಾಗುವುದರೊಂದಿಗೆ 58.09 ರೂಪಾಯಿಗಳಿಗೆ ತಲುಪಿದೆ. ಇದರಲ್ಲಿ ಸುಮಾರು ಶೇ.51.5 ಅಂದರೆ 29.89 ರೂಪಾಯಿಗಳಿಗೂ (ಸುಮಾರು ಶೇ.51.5) ಹೆಚ್ಚು ಮೊತ್ತ ಸರಕಾರಿ ತೆರಿಗೆಗಳಿಗೆ ಹೋಗುತ್ತವೆ. ಅಂದರೆ ಪ್ರತಿ ಲೀಟರ್ ಪೆಟ್ರೋಲ್ ನೈಜ ಬೆಲೆ 28.20 ರೂಪಾಯಿಗಳು!

* ಅದೇ ರೀತಿ ಡೀಸೆಲ್ ದರ 40.15ರಿಂದ 42.21ಕ್ಕೆ ಏರಿಕೆಯಾಗಿದೆ. ಇಲ್ಲಿ ಸುಮಾರು 12.77 ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು (ಸುಮಾರು ಶೇ.30.25) ಸರಕಾರವು ತೆರಿಗೆ ರೂಪದಲ್ಲಿ ಕಸಿದುಕೊಳ್ಳುತ್ತದೆ. ಅಂದರೆ ಪ್ರತಿ ಲೀಟರ್ ಡೀಸೆಲ್ ನೈಜ ಬೆಲೆ ಕೇವಲ 29.44 ರೂಪಾಯಿಗಳು.

* ಸೀಮೆಎಣ್ಣೆ ಪ್ರತೀ ಲೀಟರ್ ದರದಲ್ಲಿ 3 ರೂಪಾಯಿಗಳನ್ನು ಹೆಚ್ಚಿಸಲಾಗಿದೆ. ಅಂದರೆ ಇನ್ನು ಪ್ರತೀ ಲೀಟರ್ ಕೆರೋಸಿನ್ ಬೆಲೆ 12.50 ರೂಪಾಯಿ. ಆದರೂ ಇಲ್ಲಿ ಸರಕಾರ ಈಗಲೂ 15.82 ರೂಪಾಯಿ ಸಹಾಯಧನ ನೀಡುತ್ತಿದೆ. ಸೀಮೆಎಣ್ಣೆ ನಿಜವಾದ ದರ 28.32 ರೂಪಾಯಿಗಳು.

* ಅಡುಗೆ ಅನಿಲ ದರದಲ್ಲಿ ಪ್ರತಿ ಸಿಲಿಂಡರ್‌ಗೆ 35 ರೂಪಾಯಿಗಳನ್ನು ಹೆಚ್ಚಿಸಲಾಗಿದೆ. ಪ್ರಸಕ್ತ ಬೆಂಗಳೂರಿನಲ್ಲಿ ಸಿಲಿಂಡರ್ ಒಂದರ ಬೆಲೆ 360.55 ರೂಪಾಯಿಗಳು. ಈಗಲೂ ಸರಕಾರ 226.90 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಎಲ್‌ಪಿಜಿ ಸಿಲಿಂಡರ್ ನೈಜ ಬೆಲೆ 587.45 ರೂಪಾಯಿಗಳು.

ಇದೀಗ ಬೆಲೆ ನಿಯಂತ್ರಣವನ್ನೂ ಈ ಕಂಪನಿಗಳಿಗೆ ಒಪ್ಪಿಸಿರುವುದರಿಂದ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆಯಾಗುತ್ತದೆ. ಇದಲ್ಲದೆ, ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ಪೆಟ್ರೋಲ್ ವಿತರಣಾ ಕಂಪನಿಗಳ ನಡುವೆ ದರ-ಸಮರ ಆರಂಭವಾದರೆ, ಗ್ರಾಹಕನಿಗೇನಾದರೂ ಒಂದಿಷ್ಟು ಲಾಭವಾಗಬಹುದೇ ಎಂಬುದು ಜನಸಾಮಾನ್ಯರ ನಿರೀಕ್ಷೆ.
ಸಂಬಂಧಿತ ಮಾಹಿತಿ ಹುಡುಕಿ