ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾವಿರಾರು ಹಾವುಗಳನ್ನು ರಕ್ಷಿಸಿದಾತ ಕಾಳಿಂಗ ಸರ್ಪಕ್ಕೆ ಬಲಿ (King cobra | Kendrapada | snake man | Rajkishore Pani)
Bookmark and Share Feedback Print
 
ಸಾವಿರಾರು ಸರೀಸೃಪಗಳು ಮತ್ತು ಕಾಡು ಪ್ರಾಣಿಗಳನ್ನು ರಕ್ಷಿಸಿದ ವ್ಯಕ್ತಿಯೊಬ್ಬ ಕೊನೆಗೆ ಅದೇ ಕಾಯಕದಲ್ಲಿ ಸಾವನ್ನಪ್ಪಿದ ಪ್ರಕರಣವಿದು. ಹಾವುಗಳಲ್ಲೇ ಕಿಂಚಿತ್ತೂ ಕರುಣೆ ತೋರಿಸದ ಜಾತಿಯದ್ದು ಎಂದು ಹೇಳಲಾಗುವ ಕಾಳಿಂಗ ಸರ್ಪ ಈತನನ್ನು ಬಲಿ ಪಡೆದುಕೊಂಡಿದೆ. ಆ ಮೂಲಕ ನಾಲ್ಕು ವರ್ಷಗಳ ಹಿಂದೆ ಸಾಗರ ಜೀವಿಗೆ ಬಲಿಯಾದ ಸ್ಟೀವ್ ಇರ್ವಿನ್‌ನನ್ನು ಈತನೂ ನೆನಪಿಸಿದ್ದಾನೆ.

ಆತನ ಹೆಸರು ರಾಜ್‌ಕಿಶೋರ್ ಪಾಣಿ. 62ರ ಹರೆಯದ ಉರಗ ಪ್ರೇಮಿ ಒರಿಸ್ಸಾದ ಕೇಂದ್ರಾಪಾಡ ಜಿಲ್ಲೆಯ ಗರುದಾಪುರ್ ಗ್ರಾಮದವನು. ಇದುವರೆಗೆ ಸುಮಾರು 4,000 ಸರೀಸೃಪಗಳನ್ನು ಆಪತ್ತಿನಿಂದ ರಕ್ಷಿಸಿದ ಈತನನ್ನು 'ಸ್ನೇಕ್ ಮ್ಯಾನ್' ಎಂದೇ ಕರೆಯಲಾಗುತ್ತಿತ್ತು.

ತನ್ನ ಮಗನ ಮದುವೆ ಕಾರ್ಯಕ್ರಮ ನಡೆಯುತ್ತಿದ್ದರೂ ನೆರೆ ಮನೆಯಾತನ ಕರೆಗೆ ಓಗೊಟ್ಟು ಇಟ್ಟಿಗೆ ಗೂಡಿನಲ್ಲಿದ್ದ ಅಪಾಯಕಾರಿ ಕಾಳಿಂಗ ಸರ್ಪವನ್ನು ರಕ್ಷಿಸಲು ರಾಜ್ ಧಾವಿಸಿದ್ದ. ಈ ಹಿಂದೆ ನೂರಾರು ಕಾಳಿಂಗ ಸರ್ಪಗಳನ್ನು ಪಳಗಿಸಿದ ಅನುಭವವಿದ್ದರೂ, ಆ ದಿನ ರಾಜನದ್ದಾಗಿರಲಿಲ್ಲ. ಹತ್ತಿರ ಹೋಗುತ್ತಿದ್ದಂತೆ ಒಮ್ಮಿಂದೊಮ್ಮೆಲೇ ರಾಜ್ ಮೇಲೆ ದಾಳಿ ನಡೆಸಿ ಕಚ್ಚಿಯೇ ಬಿಟ್ಟಿತ್ತು.

ತಕ್ಷಣವೇ ಗ್ರಾಮಸ್ಥರು ರಾಜನನ್ನು ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆ ಹೊತ್ತಿಗಾಗಲೇ ವೇದನೆಯಿಂದ ಕೂಗುತ್ತಿದ್ದ ರಾಜ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದ. ಆಸ್ಪತ್ರೆ ತಲುಪಿದ ಕೆಲವೇ ನಿಮಿಷಗಳಲ್ಲಿ ರಾಜ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ದಷ್ಟಪುಷ್ಟವಾಗಿರುವ ಆನೆಯನ್ನು ಕೆಲವೇ ಗಂಟೆಗಳಲ್ಲಿ ಸಾಯಿಸುವಷ್ಟು ವಿಷವನ್ನು ಹೊಂದಿರುವ ಕಾಳಿಂಗ ಸರ್ಪಕ್ಕೆ ಹುಲು ಮಾನವನನ್ನು ಬಲಿ ತೆಗೆದುಕೊಳ್ಳಲು ಕೆಲವೇ ನಿಮಿಷಗಳು ಸಾಕು ಎನ್ನುತ್ತಾರೆ ಉರಗ ತಜ್ಞರು. ಅವರ ಪ್ರಕಾರ ಕೇವಲ 15 ನಿಮಿಷದಲ್ಲೇ ಕಾಳಿಂಗ ಸರ್ಪದ ವಿಷದಿಂದ ಮನುಷ್ಯರು ಸಾಮಾನ್ಯವಾಗಿ ಸಾವನ್ನಪ್ಪುತ್ತಾರೆ.

ಆಪತ್ಬಾಂಧವನಾಗಿದ್ದ ರಾಜ...
ಯಾರ ಮನೆಯಲ್ಲಿ ಹಾವು ಕಂಡರೂ ಅದು ಯಾವುದೇ ಹೊತ್ತಾಗಿದ್ದರೂ ಲೆಕ್ಕಿಸದೆ ಧಾವಿಸುತ್ತಿದ್ದ ರಾಜನ ಸಾವನ್ನು ಗ್ರಾಮಸ್ಥರು ಅರಗಿಸಿಕೊಳ್ಳುತ್ತಿಲ್ಲ. ಈ ಹಿಂದಿನ ನೆರೆ-ಪ್ರವಾಹ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಸುಮಾರು 500 ಹಾವುಗಳನ್ನು ಈತ ರಕ್ಷಿಸಿ, ಅವುಗಳನ್ನು ಪೋಷಿಸಿದ ನಂತರ ಬಿಡುಗಡೆ ಮಾಡಿದ್ದನ್ನು ಅವರೀಗ ಸ್ಮರಿಸಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಹಾವು ಕಚ್ಚುತ್ತಿರುವುದು ರಾಜನಿಗೆ ಇದೇ ಮೊದಲಾಗಿರಲಿಲ್ಲ. ಇತ್ತೀಚೆಗಷ್ಟೇ ಹಾವೊಂದು ಆತನ ರಕ್ತದ ರುಚಿ ನೋಡಿತ್ತು. ಅದೇ ಕಾರಣದಿಂದಾಗಿ ಆತ 10 ದಿನಗಳನ್ನು ಕಟಕ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ.

ರಾಜಾ ಸರೀಸೃಪಗಳನ್ನು ಹಿಡಿಯುವುದರಲ್ಲಿ ಪಳಗಿದವನು. ಸಾಮಾನ್ಯವಾಗಿ ತುರ್ತು ಚುಚ್ಚುಮದ್ದುಗಳನ್ನು ಜತೆಯಾಗಿಯೇ ಇಟ್ಟುಕೊಳ್ಳುತ್ತಾನೆ. ವಿಷವನ್ನು ಹೊರ ತೆಗೆಯುವ ಪಂಪ್ ಕೂಡ ಆತನ ಮನೆಯಲ್ಲಿರುತ್ತದೆ. ಇವೆಲ್ಲದರ ಹೊರತಾಗಿಯೂ ಆತನನ್ನು ಬದುಕಿಸುವುದು ನಮಗೆ ಸಾಧ್ಯವಾಗಿಲ್ಲ. ಆತನ ಸಾವು ಜೀವಜಗತ್ತಿಗೂ ತುಂಬಲಾರದ ನಷ್ಟ ಎಂದು ಪ್ಯೂಪಲ್ ಫಾರ್ ಎನಿಮಲ್ಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಧಾಂಶು ಫರೀದಾ ಕಂಬನಿ ಮಿಡಿದಿದ್ದಾರೆ.

ರಾಜನ ಸಾವು ನಮಗೆ 2006ರಲ್ಲಿ ಸಾವನ್ನಪ್ಪಿದ ಆಸ್ಟ್ರೇಲಿಯಾದ 'ಕ್ರೊಕೊಡೈಲ್ ಹಂಟರ್' ಖ್ಯಾತಿಯ ಪ್ರಾಣಿ ರಕ್ಷಕ ಸ್ಟೀವ್ ಇರ್ವಿನ್‌ರನ್ನು ನೆನಪಿಸುತ್ತಿದೆ. ಅವರು ಟಿವಿ ಕಾರ್ಯಕ್ರಮಕ್ಕಾಗಿ ಸಾಗರದಾಳದಲ್ಲಿ ಚಿತ್ರೀಕರಣ ನಿರತರಾಗಿದ್ದಾಗ ಸ್ಟಿಂಗ್‌ರೇ ಎಂಬ ಮೀನಿನ ಇರಿತಕ್ಕೆ ಬಲಿಯಾಗಿದ್ದರು. ಅದೇ ರೀತಿ ನಮ್ಮ ರಾಜ ಕೂಡ ಉರಗ ರಕ್ಷಣೆಯ ಸಂದರ್ಭದಲ್ಲಿ ನಮ್ಮನ್ನು ಅಗಲಿದ್ದಾರೆ ಎಂದು ಗ್ರಾಮಸ್ಥರೊಬ್ಬರು ದುಃಖ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ