ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ, ವರುಣ್ ಗಾಂಧಿಯನ್ನು ಕೈ ಬಿಡಲ್ಲ: ಗಡ್ಕರಿ ಸ್ಪಷ್ಟೋಕ್ತಿ (Bihar | Narendra Modi | Varun Gandhi | Nitin Gadkari)
Bookmark and Share Feedback Print
 
ಬಿಹಾರ ವಿಧಾನಸಭಾ ಚುನಾವಣೆಗಳಿಂದ ನರೇಂದ್ರ ಮೋದಿ ಮತ್ತು ವರುಣ್ ಗಾಂಧಿಯವರನ್ನು ದೂರ ಉಳಿಸಬೇಕೆಂಬ ಜೆಡಿಯು ಷರತ್ತು ಬಿಜೆಪಿಯನ್ನು ಅಲುಗಾಡಿಸಿದಂತೆ ಕಾಣಿಸುತ್ತಿಲ್ಲ. ಅದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವುದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ. ಪ್ರಚಾರಕ್ಕೆ ಯಾರನ್ನು ನಿಯೋಜಿಸಬೇಕು ಎಂಬುದನ್ನು ಬಿಜೆಪಿ ಮಾತ್ರ ನಿರ್ಧರಿಸಲು ಸಾಧ್ಯವೇ ಹೊರತು ಬೇರಿನ್ಯಾರಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಚಾರಕ್ಕಾಗಿ ನರೇಂದ್ರ ಮೋದಿಯವರೂ ಹೋಗಬಹುದು. ಯಾವುದೇ ಸಮಸ್ಯೆಯಿಲ್ಲ. ವರುಣ್ ಗಾಂಧಿ ಕೂಡ ಹೋಗಬಹುದು. ಇದನ್ನು ಬಿಹಾರದ ಬಿಜೆಪಿ ಘಟಕವು ನಿರ್ಧರಿಸುತ್ತದೆ. ಅವರು ಕೇಳುವ ಯಾವುದೇ ನಾಯಕರನ್ನು ಕಳುಹಿಸಲಾಗುತ್ತದೆ ಎಂದು ಗಡ್ಕರಿ ಸ್ಪಷ್ಟಪಡಿಸಿದರು.

ಈ ವಿಚಾರದಲ್ಲಿ ಬಿಜೆಪಿಯೊಂದೇ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ. ಇಲ್ಲಿ ಇತರ ಪಕ್ಷಗಳ ಒಳಿತು-ಕೆಡುಕಿನ ಕುರಿತು ನಾವು ಖಂಡಿತಾ ಯೋಚಿಸುವುದಿಲ್ಲ ಎಂದು ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಾ ತಿಳಿಸಿದ್ದಾರೆ. ಆ ಮೂಲಕ ಮೋದಿ ಮತ್ತು ವರುಣ್ ಎಂಬ ಎರಡು ಫೈರ್ ಬ್ರಾಂಡ್‌ಗಳನ್ನು ಪ್ರಚಾರದಿಂದ ಕೈ ಬಿಡಲಾಗುತ್ತದೆ ಎಂಬ ವರದಿಗಳಿಗೆ ತಣ್ಣೀರೆರಚಲಾಗಿದೆ.

ಅದೇ ಹೊತ್ತಿಗೆ ಕೋಸಿ ನೆರೆ ಸಂತ್ರಸ್ತರಿಗೆ ಗುಜರಾತ್‌ನ ಮೋದಿ ಸರಕಾರ ನೀಡಿದ್ದ ಐದು ಕೋಟಿ ರೂಪಾಯಿಗಳನ್ನು ವಾಪಸ್ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧಾರ ದುರದೃಷ್ಟಕರ ಎಂದು ಗಡ್ಕರಿ ಬಣ್ಣಿಸಿದ್ದಾರೆ.

ಅದು ಗುಜರಾತ್ ಜನರಿಂದ ಸಂಗ್ರಹಿಸಿದ ಹಣವೇ ಹೊರತು, ಮೋದಿಯವರ ವೈಯಕ್ತಿಕ ನಿಧಿಯಲ್ಲ. ಇದನ್ನು ತಿರಸ್ಕರಿಸಿದ ಬಿಹಾರ ನಿರ್ಧಾರ ಸರಿಯಾದುದಲ್ಲ ಎಂದು ಅಭಿಪ್ರಾಯಪಟ್ಟರು.

ಮೋದಿ ಮತ್ತು ವರುಣ್ ಗಾಂಧಿಯನ್ನು ಬಿಹಾರ ಚುನಾವಣಾ ಪ್ರಚಾರದಿಂದ ಹೊರಗಿಡಬೇಕೆಂದು ಜೆಡಿಯು ಬೇಡಿಕೆ ಮುಂದಿಟ್ಟಿತ್ತು. ಆದರೆ ಇದನ್ನು ಬಿಜೆಪಿ ತಳ್ಳಿ ಹಾಕುತ್ತಾ ಬಂದಿದ್ದು, ಗಡ್ಕರಿ ಸ್ಪಷ್ಟನೆಯೊಂದಿಗೆ ನಿತೀಶ್ ಹಿನ್ನಡೆ ಅನುಭವಿಸಿದ್ದಾರೆ.

ಅದೇ ಹೊತ್ತಿಗೆ ಉಮಾ ಭಾರತಿಯವರು ಪಕ್ಷಕ್ಕೆ ಮರಳುವ ಬಗ್ಗೆ ಪ್ರಶ್ನಿಸಿದಾಗ, 'ಅದರ ಕುರಿತು ಕೇಂದ್ರ ಮತ್ತು ಮಧ್ಯಪ್ರದೇಶ ರಾಜ್ಯ ಘಟಕದಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ವೃತ್ತಿಪರ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡುತ್ತದೆ ಎಂದು ಬಿಜೆಪಿ ಅಧ್ಯಕ್ಷರು ಗುರುತಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ