ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತಿನ ಈ ಭಿಕ್ಷುಕ ಕೊಡುಗೈ ದಾನಿ, ಹೆಸರು ಪ್ರಜಾಪತಿ! (Beggar | Khimjibhai Prajapati | Mehsana | Shrimati Kesarbai Kilachand School)
Bookmark and Share Feedback Print
 
ಸಮಾಜಸೇವೆಗೆ ಬೇಕಾಗಿರುವುದು ಥೈಲಿಯಲ್ಲ, ವಿಶಾಲವಾದ ಹೃದಯ ಎಂಬುದನ್ನು ಗುಜರಾತ್‌ನ ಭಿಕ್ಷುಕನೋರ್ವ ನಿರೂಪಿಸಿ ತೋರಿಸಿದ್ದಾನೆ. ಇಲ್ಲಿನ ಕಿವುಡರ ಶಾಲೆಯೊಂದರ 11 ಬಡ ವಿದ್ಯಾರ್ಥಿನಿಯರಿಗೆ ವಸ್ತ್ರ ವಿತರಿಸುವ ಮೂಲಕ ಭಿಕ್ಷುಕರಲ್ಲದವರಿಗೂ ಆತ ಮಾದರಿಯಾಗಿದ್ದಾನೆ, ಕಲಿಯುಗದ ಕರ್ಣನಾಗಿದ್ದಾನೆ.

ವೃತ್ತಿಗೆ ವಿರುದ್ಧವಾದ ಹೆಸರು ಆತನದ್ದು. ಕಿಮ್ಜಿಬಾಯ್ ಪ್ರಜಾಪತಿ, ವಯಸ್ಸು 64. ಗುಜರಾತಿನ ಮೆಹ್ಸಾನ ಜಿಲ್ಲೆಯವನು. ಕಳೆದ ಶನಿವಾರವಷ್ಟೇ ಇಲ್ಲಿನ ಕಿವುಡ ಮಕ್ಕಳಿಗಾಗಿನ 'ಶ್ರೀಮತಿ ಕೇಸರಿಬಾಯ್ ಕಿಲ್ಚಂದ್ ಶಾಲೆ'ಯ 11 ಕಿವುಡ ಹಾಗೂ ಮೂಗ ಬಡ ವಿದ್ಯಾರ್ಥಿನಿಯರಿಗೆ ಬಟ್ಟೆ-ಬರೆಗಳನ್ನು ಉಚಿತವಾಗಿ ವಿತರಿಸಿದ್ದಾನೆ.

ಕಳೆದ ಮೂರು ದಶಕಗಳಿಂದ ಮೆಹ್ಸಾನ್ ಪ್ರದೇಶದಲ್ಲಿ ಭಿಕ್ಷೆಯೆತ್ತುತ್ತಿರುವ ಪ್ರಜಾಪತಿ ಸ್ವತಃ ಯಾರದೋ ಮನೆಯ ಕೂಳನ್ನು ನಿರೀಕ್ಷಿಸುತ್ತಾ ಕಾಲ ಕಳೆಯುತ್ತಿರುವವನು. ನೀರು ಕಂಡೇ ಇರದ ಬಟ್ಟೆಗಳನ್ನು ಧರಿಸುತ್ತಿದ್ದರೂ, ಅದಕ್ಕೂ ತತ್ವಾರವನ್ನೆದುರಿಸುತ್ತಿರುವ ಬಡ ಮಕ್ಕಳನ್ನು ಕಂಡು ಮರುಗಿ ಈ ನಿರ್ಧಾರಕ್ಕೆ ಬಂದಿದ್ದಾನೆ. ತನ್ನದೇ ಸಂಪಾದನೆಯಲ್ಲಿ 3,000 ರೂಪಾಯಿಗಳನ್ನು ಹೊಂದಿಸಿ ಶಾಲೆಯ ಬಾಗಿಲಿಗೆ ಹೋಗಿದ್ದಾನೆ.

ಪ್ರಜಾಪತಿ ಸಾಮಾನ್ಯವಾಗಿ ಭಿಕ್ಷೆ ಬೇಡುವುದು ಮೆಹ್ಸಾನಾದ ಸೀಮಾಂಧರ್ ಸ್ವಾಮಿ ಜೈನ ಬಸದಿ ಮತ್ತು ಹನುಮಾನ್ ಗುಡಿಯ ಹೊರಗಡೆ. ಅಲ್ಲಿಗೆ ಬರುವ ಭಕ್ತಾದಿಗಳ ಮುಂದೆ ಕೈಯೊಡ್ಡಿ ಸಿಕ್ಕಿದ ಚಿಲ್ಲರೆಗಳನ್ನು ಸಂಗ್ರಹಿಸಿ ತನ್ನ ಬದುಕು ಸಾಗಿಸಿ ಉಳಿದ ಹಣವನ್ನು ದಾನ ಮಾಡಿ ಬಲ್ಲಿದನೆನಿಸಿಕೊಳ್ಳುತ್ತಾನೆ.

ದಾನದಿಂದ ಸಂತೋಷವಾಗಿದೆ...
ತನ್ನ ಕೈಲಾದ ರೀತಿಯಲ್ಲಿ ಮಾಡಿರುವ ಸೇವೆಯಿಂದ ಸಂತೃಪ್ತನಾಗಿರುವ ಪ್ರಜಾಪತಿಗೆ ದಿನಕ್ಕೆರಡೇ ಊಟವಂತೆ. ಉಳಿದ ಹಣವನ್ನು ರಾಜ್‌ಕೋಟ್‌ನಲ್ಲಿರುವ ಪತ್ನಿಗೆ ಕಳುಹಿಸುತ್ತೇನೆ. ಆಕೆ ಶ್ವಾಸಕೋಸದ ಸೋಂಕು ಮತ್ತು ಅಲ್ಸರ್‌ನಿಂದ ಬಳಲುತ್ತಿದ್ದಾಳೆ. ಇದನ್ನು ಹೊರತುಪಡಿಸಿದ ನನ್ನ ಸಂಪಾದನೆ ನನಗಿಂತ ಬಡವರಿಗೆ ಮೀಸಲಾಗಿರುತ್ತದೆ. ಹಸಿವಿನಿಂದ ಬಳಲುತ್ತಿರುವವರಿಗೆ ನನ್ನಿಂದ ಸಾಧ್ಯವಾಗುವ ಸಹಾಯ ಮಾಡುತ್ತೇನೆ. ಅದೇ ರೀತಿ ಬಡ ಹುಡುಗಿಯರಿಗೆ ಅಷ್ಟೋ ಇಷ್ಟೋ ನೀಡಿದ್ದೇನೆ. ಇದರಿಂದ ನನಗೆ ಆತ್ಮತೃಪ್ತಿಯಿದೆ ಎನ್ನುತ್ತಾನೆ ಪ್ರಜಾಪತಿ.

ಬಡವನಾಗಿರಲಿ, ಶ್ರೀಮಂತನಾಗಿರಲಿ -- ಮತ್ತೊಬ್ಬರಿಗೆ ಸಹಾಯ ಮಾಡಲು ಯಾವತ್ತೂ ಮುಂದೆ ಬರಬೇಕು ಎನ್ನುವ ಮೂಲಕ ದಾನವೆಂದ ಕೂಡಲೇ ಮಾರುದ್ದ ಹಾರುವ ಶ್ರೀಮಂತರಿಗೂ ಆತ ಕರೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ