ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ಮಕಾಂಡಗಳಿಂದ ಪಾರಾಗೋದು ಹೇಗೆ?: ರಂಜಿತಾ ಪಾಠ (Ranjita | how to survive a scandal? | godman Nityananda | Sex Scandal)
Bookmark and Share Feedback Print
 
ಪರಮಹಂಸ ನಿತ್ಯಾನಂದ ಸ್ವಾಮಿಯೊಂದಿಗಿನ ಕಾಮಕಾಂಡದ ವಿವಾದಿತ ವೀಡಿಯೋಗಳು ಮಾಧ್ಯಮಗಳಲ್ಲಿ ಬಹಿರಂಗವಾದ ಮೂರು ತಿಂಗಳ ನಂತರ ನಟಿ ರಂಜಿತಾ ಹೊಸ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, 'ಅಪನಿಂದೆಗಳಿಂದ ಪಾರಾಗುವುದು ಹೇಗೆ?' ಎಂಬ ವಿಷಯದ ಕುರಿತು ತನ್ನ ಅನುಭವವನ್ನು ಸೇರಿಸಿ ಪುಸ್ತಕ ಬರೆಯುತ್ತಿದ್ದಾರೆ.

ಬಿಡದಿ ಆಶ್ರಮದಲ್ಲಿ ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ಕಾಮಕಾಂಡವನ್ನು ಅಲ್ಲಿನ ಚಾಲಕ ಲೆನಿನ್ ಕರುಪ್ಪನ್ ಚಿತ್ರೀಕರಿಸಿ ಬಹಿರಂಗಪಡಿಸಿದ ನಂತರ ಭೂಗತರಾಗಿದ್ದ ರಂಜಿತಾ ಇದೀಗ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ನಡುವೆ ಅವರು ಮಾಧ್ಯಮ ವರದಿಗಳಿಂದ ಅನುಭವಿಸಿದ ಯಾತನೆಯನ್ನೂ ಹೊರಗೆಡವಿದ್ದು, ಅವುಗಳಿಂದ ಹೊರ ಬರುವಲ್ಲಿ ತನಗೆ ಸಹಕಾರಿಯಾದವರನ್ನು ನೆನಪಿಸಿಕೊಂಡಿದ್ದಾರೆ.

ಕಳೆದ ಆರು ತಿಂಗಳ ಅವಧಿಯಲ್ಲಿ ನನ್ನ ಜೀವನದಲ್ಲಿ ನಡೆದು ಹೋದ ಘಟನೆಗಳನ್ನು ಆಧರಿಸಿಯೇ, ನನ್ನ ಅನುಭವವನ್ನು ಧಾರೆಯೆರೆದು ನಾನು ಪುಸ್ತಕವೊಂದನ್ನು ಬರೆಯಲಿದ್ದೇನೆ. ಜತೆಗೆ ಇತರರು ಅನುಭವಿಸಿದ ಮಾನಸಿಕ ಯಾತನೆಗಳನ್ನು ಕೂಡ ನಾನು ಬಳಸಿಕೊಳ್ಳಲಿದ್ದೇನೆ. ವೈಯಕ್ತಿಕ ಸಮಸ್ಯೆಗಳ ವಿಚಾರ ಬಂದಾಗ ಸಂಕಷ್ಟಕ್ಕೊಳಗಾಗುವ ಜನರಿಗೆ ಈ ಪುಸ್ತಕ ಸಹಾಯವಾಗಲಿದೆ. ಈ ಸಂಬಂಧ ಈಗಾಗಲೇ ಕೆಲವು ಪ್ರಕಾಶಕರ ಜತೆ ಮಾತುಕತೆ ನಡೆಸುತ್ತಿದ್ದೇನೆ ಎಂದು ಸ್ಟೈಲ್ ಬದಲಾಯಿಸಿಕೊಂಡಿರುವ ನಟಿ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಜತೆ ಹೇಳಿಕೊಂಡಿದ್ದಾರೆ.

ಜತೆಗೆ ಇಂದಿನ ಯುವಜನತೆಗೆ ಉಪಯೋಗಕ್ಕೆ ಬರುವ ಪುಸ್ತಕವೊಂದನ್ನೂ ಬರೆಯುತ್ತಿದ್ದೇನೆ. ಆದರೆ ಅದಕ್ಕೂ ಮೊದಲು ನನ್ನ ಅನುಭವವನ್ನು ಆಧರಿಸಿದ ಪುಸ್ತಕ ಮೊದಲು ಮಾರುಕಟ್ಟೆಗೆ ಬರಲಿದೆ ಎಂದು ಹೇಳುವ ರಂಜಿತಾ ಬೆಡ್ ರೂಮಿನಲ್ಲಿ ಯೋಗಿಗಳು, ಸ್ವಾಮಿಗಳ ಹತ್ತಾರು ಪುಸ್ತಕಗಳು ಕಾಣ ಸಿಗುತ್ತವೆ.

ನಾನು ಹಿಂದಿನಿಂದಲೂ ಪುಸ್ತಕದ ಹುಳು ಎಂದೂ ರಂಜಿತಾ ಹೇಳಿಕೊಂಡಿದ್ದಾರೆ. ಅಲ್ಲದೆ ಇದುವರೆಗಿನ ಕಾಲ್ಪನಿಕ ಕಥೆಗಳಿಂದ ಇದೀಗ ವೇದಾಂತಿಯಾಗುವತ್ತ ಸಾಗುತ್ತಿದ್ದೇನೆ, ನಾನು ಭಾರತೀಯ ಆಧ್ಯಾತ್ಮಿಕ ಗ್ರಂಥಗಳತ್ತ ಹೆಚ್ಚಿನ ಒಲವು ಹೊಂದಿದ್ದೇನೆ ಎಂದು ಇತ್ತೀಚೆಗಷ್ಟೇ ಚೆನ್ನೈಗೆ ಆಗಮಿಸಿರುವ ನಟಿ ಹೇಳಿದ್ದಾರೆ.

ಗಂಡ, ಮನೆಯವರಿಂದ ಬೆಂಬಲ...
ನೀವು ವಿವಾದಕ್ಕೊಳಗಾದಂತೆ ಮಾಯವಾದದ್ದು ಯಾಕೆ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಲು ರಂಜಿತಾ ನಿರಾಕರಿಸಿದ್ದಾರೆ. ಹಿಂದೆ ನಡೆದು ಹೋದ ವಿಚಾರಗಳಿಗೆ ಅಂಟಿಕೊಳ್ಳಲು, ಅದನ್ನು ನೆನಪಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಾಳಿನ ಕುರಿತು ಯೋಚನೆ ಮಾಡುವ ಆಸೆ ನನಗೆ. ನಿಜಕ್ಕೂ ನನಗೆ ತುಂಬಾ ನೋವಾಗಿದೆ, ಮಾನಸಿಕ ಆಘಾತವನ್ನು ಅನುಭವಿಸಿದ್ದೇನೆ, ಖಿನ್ನತೆಗೊಳಗಾಗಿದ್ದೇನೆ. ಹಾಗಾಗಿ ಸ್ವಲ್ಪ ಸಮಯ ಸುಮ್ಮನಿರಲು ನಿರ್ಧರಿಸಿದೆ. ಮಾಧ್ಯಮಗಳಂತೂ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆಯುತ್ತಿದ್ದವು. ಕೆಲವರು ಸಂದರ್ಶನಗಳನ್ನೂ ಸೃಷ್ಟಿಸಿದರು ಎಂದು ತನ್ನ ಮನದಾಳವನ್ನು ಬಿಚ್ಚಿಟ್ಟರು.

ಒಂದರ ಹಿಂದೊಂದರಂತೆ ಸಮಸ್ಯೆಗಳು ಹೆಚ್ಚಾಗುತ್ತಿದ್ದ ಸಮಯವದು. ಇಂತಹ ವಿಚಾರಗಳಿಂದ ಹೊರಗೆ ಬರಲು ಒಂದಷ್ಟು ಸಮಯ ಬೇಕಾಗುತ್ತದೆ. ಆದರೆ ಜನರ ಪ್ರಕಾರ ಕಲಾವಿದರು ಸಮಯಾವಕಾಶಕ್ಕೆ ಅರ್ಹರಲ್ಲ ಎಂದು ವಿಷಾದದಿಂದಲೇ ಹೇಳುವ ರಂಜಿತಾ, ತಕ್ಷಣವೇ ತನ್ನನ್ನು ಬೆಂಬಲಿಸಿದ ಗಂಡ, ಸಹೋದರಿಯರು, ಹೆತ್ತವರು ಮತ್ತು ಅತ್ತೆ ಮಾವಂದಿರನ್ನು ನೆನಪಿಸಿಕೊಳ್ಳುತ್ತಾರೆ. ತಾನು ಕುಗ್ಗಿ ಹೋಗಿದ್ದ ಸಂದರ್ಭದಲ್ಲಿ ಬೆನ್ನು ತಟ್ಟಿದ್ದನ್ನು ಎಂದೂ ಮರೆಯಲಾರೆ ಎಂದಿದ್ದಾರೆ.

ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ಕೆಲಸ ಮಾಡುವ ಆಸಕ್ತಿ ನನಗಿಲ್ಲ ಎಂದಿರುವ ರಂಜಿತಾ, ಸಮಾಜ ಸೇವೆ ಮತ್ತು ಇನ್ನಿತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಕೆಲ ಸಮಯ ನನಗೆ ಬ್ರೇಕ್ ಬೇಕಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ