ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತವು ಆಂಡರ್ಸನ್ ಗಡೀಪಾರು ಬಯಸುತ್ತಿದೆ: ಪ್ರಧಾನಿ (Manmohan Singh | Union Carbide | Warren Anderson | Bhopal gas tragedy)
Bookmark and Share Feedback Print
 
ಭೋಪಾಲ ಅನಿಲ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಮುಖ್ಯಸ್ಥ ವಾರೆನ್ ಆಂಡರ್ಸನ್ ಗಡೀಪಾರಿನ ಕುರಿತು ಅಮೆರಿಕಾವು ಭಾರತದ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವಂತೆ ಯುಪಿಎ ಸರಕಾರವು ಪ್ರಯತ್ನಿಸಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.

ಟೊರೊಂಟೋದಿಂದ ವಾಪಸ್ ಬರುತ್ತಿರುವ ಹೊತ್ತಿನಲ್ಲಿ ವಿಶೇಷ ವಿಮಾನದಲ್ಲಿ ತಮ್ಮ ಜತೆಗಿದ್ದ ಪತ್ರಕರ್ತರ ಜತೆ ಮಾತುಕತೆ ನಡೆಸಿದ ಪ್ರಧಾನಿ, ಜಿ-20 ಶೃಂಗಸಭೆ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜತೆ ನಡೆದ ಮಾತುಕತೆ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿಲ್ಲ ಎಂದರು.

ನಾವು ನಮ್ಮ ನಿಲುವಿನಿಂದ ಹಿಂದಕ್ಕೆ ಸರಿದಿಲ್ಲ. ಆಂಡರ್ಸನ್ ಗಡೀಪಾರಿನ ಕುರಿತು ನಮ್ಮ ಪರವಾದ ನಿಲುವನ್ನು ಹೊಂದುವ ಕುರಿತು ಅಮೆರಿಕಾ ಸರಕಾರವನ್ನು ನಾವು ಕೇಳಿಕೊಳ್ಳಲಿದ್ದೇವೆ. ಆದರೆ ಇದುವರೆಗೂ ನಾವು ಯಾವುದೇ ಪ್ರಸ್ತಾಪವನ್ನು ಅಮೆರಿಕಾಕ್ಕೆ ಸಲ್ಲಿಸಿಲ್ಲ. ಅಧ್ಯಕ್ಷ ಒಬಾಮಾ ಜತೆಗಿನ ಚರ್ಚೆಯ ಸಂದರ್ಭದಲ್ಲೂ ಇದರ ಪ್ರಸ್ತಾಪ ನಡೆಸಿಲ್ಲ. ಆ ಸಂದರ್ಭ ಬರುವಾಗ ಮಾತುಕತೆ ನಡೆಸುತ್ತೇವೆ ಎಂದರು.

15,000ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣವಾದ 1984ರ ಡಿಸೆಂಬರ್ ತಿಂಗಳಲ್ಲಿ ನಡೆದ ದುರಂತದ ನಂತರ ಆಂಡರ್ಸನ್ ದೇಶ ಬಿಟ್ಟು ಹೋಗಲು ಕಾರಣ ಸರಕಾರ ಮತ್ತು ಕಾಂಗ್ರೆಸ್ ಎಂಬ ಕಳಂಕದಿಂದ ಹೊರಬಂದಿಲ್ಲವಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, 'ಸತ್ಯಾಂಶ ಏನು? ನಾವು ಯಾವುದನ್ನೂ ಮುಚ್ಚಿಡುತ್ತಿಲ್ಲ' ಎಂದಷ್ಟೇ ತಿಳಿಸಿದರು.

ಈ ಬಗ್ಗೆ ಸಚಿವರುಗಳ ಸಮಿತಿಯು ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಆಂಡರ್ಸನ್ ದೇಶ ಬಿಟ್ಟು ಹೋಗುವ ಕುರಿತು ಯಾರು ನಿರ್ಧಾರ ತೆಗೆದುಕೊಂಡರು ಎಂಬುದನ್ನು ಖಚಿತಪಡಿಸುವ ಯಾವುದೇ ದಾಖಲೆಗಳು ಕಂಡು ಬಂದಿಲ್ಲ. ಆ ದಾಖಲೆಗಳು ಈಗ ಲಭ್ಯವಿಲ್ಲ ಎಂದರು.

ಆಂಡರ್ಸನ್ ಪರಾರಿಗೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಅರ್ಜುನ್ ಸಿಂಗ್ ಅವರ ಮಧ್ಯಪ್ರದೇಶ ಸರಕಾರಗಳು ಕಾರಣ ಎಂಬ ಆರೋಪಗಳು ಖಚಿತವಾಗುತ್ತಿರುವ ಹೊತ್ತಿನಲ್ಲಿ ಸಿಂಗ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಭೋಪಾಲ್ ಕೋರ್ಟ್‌ನಿಂದ ತಪ್ಪಿಸಿಕೊಂಡಿರುವ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ 89ರ ಹರೆಯದ ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ಪ್ರಸಕ್ತ ನ್ಯೂಯಾರ್ಕ್ ಹೊರ ವಲಯದಲ್ಲಿ ವಾಸಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ