ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಂತ್ರಿಕ ದೋಷ; ಬೆಂಗಳೂರು ವಿಮಾನ ತುರ್ತು ಭೂಸ್ಪರ್ಶ (emergency landing | Kochi airport | Air India plane | Nedumbassery Airport)
Bookmark and Share Feedback Print
 
ಕೇರಳದ ಕೊಚ್ಚಿಯಿಂದ ಬೆಂಗಳೂರು ಮೂಲಕ ಚೆನ್ನೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದ ಕಾರಣದಿಂದಾಗಿ ಮರಳಿ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ಮುಂಜಾನೆ ನಡೆದಿದ್ದು, ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.

ಈ ರೀತಿ ತೀರಾ ಅಪಾಯಕಾರಿ ಹಂತಕ್ಕೆ ತಲುಪಿದ್ದು ಕೊಚ್ಚಿ-ಬೆಂಗಳೂರು-ಚೆನ್ನೈ ಮಾರ್ಗದ ಎ-320 ಐಸಿ 509 ಎಂಬ ಏರ್ ಇಂಡಿಯಾ ವಿಮಾನ. ಇದರಲ್ಲಿ 42 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿಗಳಿದ್ದರು.

ಕೊಚ್ಚಿಯ ನೆಡುಂಬಾಶ್ಯೇರಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಏಳು ಗಂಟೆಗೆ ಈ ವಿಮಾನವು ಬೆಂಗಳೂರಿಗೆ ಹೊರಟಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೇವಲ 30 ನಿಮಿಷದಲ್ಲಿ ಅದೇ ನಿಲ್ದಾಣಕ್ಕೆ ಮರಳಿದ್ದು, ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಗಳು ಹೇಳಿವೆ.

ವಿಮಾನದ ಪೈಲಟ್ ಕೊಚ್ಚಿಯ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಈ ಸಂದರ್ಭದಲ್ಲಿ ಯಾವುದೇ ಸ್ಥಿತಿಯನ್ನು ಎದುರಿಸಲು ಭದ್ರತಾ ಸಿಬ್ಬಂದಿ ಮತ್ತು ಆಂಬುಲೆನ್ಸ್‌ಗಳು ಸಿದ್ಧವಾಗಿದ್ದವು.

ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಲು ಚೆನ್ನೆಯಲ್ಲಿನ ತಂತ್ರಜ್ಞರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ತನ್ನ ಪ್ರಯಾಣವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಇತರ ವಿಮಾನಗಳಲ್ಲಿ ಕಳುಹಿಸಲಾಗಿದೆ. 12 ಪ್ರಯಾಣಿಕರನ್ನು ಕಿಂಗ್‌ಫಿಶರ್ ವಿಮಾನದಲ್ಲಿ ಬೆಂಗಳೂರಿಗೆ, ಉಳಿದವರನ್ನು ಹೈದರಾಬಾದ್ ಮತ್ತು ಚೆನ್ನೈಗೆ ತೆರಳುವ ಜೆಟ್‌ಲೈಟ್ ವಿಮಾನಗಳಲ್ಲಿ ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ