ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲಿಯಂ ಬೆಲೆಯೇರಿಕೆ; ಜುಲೈ 5ಕ್ಕೆ ಭಾರತ ಬಂದ್ (nation-wide hartal | AIADMK | JDS | fuel price rise)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಿಸಿರುವ ನಿರ್ಧಾರವನ್ನು ಖಂಡಿಸಿ ಜುಲೈ 5ರಂದು ಬಿಜೆಪಿ ಮತ್ತು ಎಡರಂಗ ಸೇರಿದಂತೆ ಹತ್ತಾರು ವಿರೋಧ ಪಕ್ಷಗಳು ಭಾರತ ಬಂದ್‌ಗೆ ಕರೆ ನೀಡಿವೆ.

ಬಿಜೆಪಿ, ಜೆಡಿಎಸ್, ಎಐಎಡಿಎಂಕೆ, ಟಿಡಿಪಿ, ಸಮಾಜವಾದಿ ಪಕ್ಷ, ಬಿಜೆಡಿ, ಐಎನ್ಎಲ್‌ಡಿ, ಸಿಪಿಐಎಂ, ಸಿಪಿಐ, ಆರ್‌ಎಸ್‌ಪಿ, ಫಾರ್ವರ್ಡ್ ಬ್ಲಾಕ್ ಸೇರಿದಂತೆ ಹಲವು ಪಕ್ಷಗಳು ಜುಲೈ ಐದರಂದು ದೇಶದಾದ್ಯಂತ ಹರತಾಳ ಹಾಗೂ ಬಂದ್ ನಡೆಸುವಂತೆ ಕರೆ ನೀಡಿವೆ.

ಬಿಜೆಪಿಯೇತರ ಪಕ್ಷಗಳು (ಜೆಡಿಎಸ್, ಎಐಎಡಿಎಂಕೆ, ಟಿಡಿಪಿ, ಸಮಾಜವಾದಿ ಪಕ್ಷ, ಬಿಜೆಡಿ, ಐಎನ್ಎಲ್‌ಡಿ, ಸಿಪಿಐಎಂ, ಸಿಪಿಐ, ಆರ್‌ಎಸ್‌ಪಿ, ಫಾರ್ವರ್ಡ್ ಬ್ಲಾಕ್) ಜುಲೈ ಐದರಂದು 12 ಗಂಟೆಗಳ ಹರತಾಳ ನಡೆಸುವಂತೆ ಕರೆ ನೀಡಿದ ಬೆನ್ನಿಗೆ, ಅದೇ ದಿನ ಭಾರತ ಬಂದ್‌ಗೆ ಬಿಜೆಪಿ ಕರೆ ನೀಡಿದೆ.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇದನ್ನು ಪ್ರಕಟಿಸಿದ್ದು, ಕೇಂದ್ರ ಸರಕಾರದ ಅಮಾನವೀಯ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅಲ್ಲದೆ ಯುಪಿಎ ಸರಕಾರವು ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ದರವನ್ನು ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆಹಾರ ಹಣದುಬ್ಬರ ದರ ಶೇ.17 ಹಾಗೂ ಹಣದುಬ್ಬರ ಎರಡಂಕಿ ತಲುಪಿರುವ ಹೊತ್ತಿನಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಏಕಾಏಕಿ ಇಂಧನ ದರವನ್ನು ಏರಿಸುವ ಮೂಲಕ ಜನತೆಯ ಮೇಲೆ ಮಣಭಾರದ ಹೊರೆಯನ್ನು ಹೊರಿಸಿದೆ ಎಂದು ಸಿಪಿಐಎಂನ ಪ್ರಕಾಶ್ ಕಾರಟ್, ಸಿಪಿಐನ ಎ.ಬಿ. ಬರ್ದನ್, ಫಾರ್ವರ್ಡ್ ಬ್ಲಾಕ್‌ನ ಬೇಬಬ್ರತಾ ಬಿಸ್ವಾಸ್ ಮತ್ತು ಆರ್‌ಎಸ್‌ಪಿಯ ಟಿ.ಜೆ. ಚಂದ್ರಚೂಡನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ದರದಲ್ಲಿ ಭಾರೀ ಹೆಚ್ಚಳ ಹಾಗೂ ಬೆಲೆ ನಿಗದಿ ಪ್ರಕ್ರಿಯೆಯನ್ನು ಮಾರುಕಟ್ಟೆಗೆ ಮುಕ್ತಗೊಳಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಸರಕಾರವು ಜನತೆಗೆ ಮತ್ತೊಂದು ದೊಡ್ಡ ಹೊಡೆತವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಜುಲೈ ಐದರಂದು ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ನಡೆಯುವ ಹರತಾಳಕ್ಕೆ ಬೆಂಬಲ ನೀಡುವಂತೆ ಇತರ ಜಾತ್ಯತೀತ ಪಕ್ಷಗಳ ಬೆಂಬಲ ಕೋರುವುದಾಗಿ ಇದೇ ಸಂದರ್ಭದಲ್ಲಿ ಎಡಪಕ್ಷಗಳ ಮುಖಂಡರು ತಿಳಿಸಿದ್ದಾರೆ. ಇದರ ಬೆನ್ನಿಗೆ ಬಿಜೆಪಿ ಕೂಡ ಅದೇ ಹಾದಿ ತುಳಿದಿದ್ದು, ಭಾರತ ಬಂದ್‌ಗೆ ಕರೆ ನೀಡಿದೆ.

ಜೀವನಾವಶ್ಯಕ ವಸ್ತುಗಳಾದ ನೀರು, ಹಾಲು, ವಿದ್ಯುತ್, ಆಸ್ಪತ್ರೆ ಮತ್ತು ಇತರ ತುರ್ತು ಸೇವೆಗಳನ್ನು ಹರತಾಳದಿಂದ ಹೊರಗಿಡಲಾಗಿದೆ ಎಂದು ಬಿಜೆಪಿಯೇತರ ಪಕ್ಷಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ