ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ತ ನಕ್ಸಲರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗಿದೆ- ಆಕ್ಷೇಪ (National Human Rights Commission | Home Ministry | naxals | India)
Bookmark and Share Feedback Print
 
ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾದ ಮಾವೋವಾದಿಗಳ ಕಳೇಬರಗಳನ್ನು ಸತ್ತ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಗೃಹ ಸಚಿವಾಲಯಕ್ಕೆ ನೋಟೀಸ್ ನೀಡಿದೆ.

ದುರ್ಗಮ ಪ್ರದೇಶಗಳಲ್ಲಿ ಸಾವನ್ನಪ್ಪಿದ ನಕ್ಸಲರ ಮೃತ ದೇಹಗಳನ್ನು ಸತ್ತ ಪ್ರಾಣಿಗಳ ಕೈ-ಕಾಲುಗಳನ್ನು ಕಟ್ಟಿ ಬಡಿಗೆಯಲ್ಲಿ ನೇತು ಹಾಕಿಕೊಂಡು ಹೋಗುವಂತೆ, ಇಬ್ಬಿಬ್ಬರು ಸಿಬ್ಬಂದಿಗಳು ಹೊತ್ತೊಯ್ಯುವ ಭಾವ ಚಿತ್ರಗಳು ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್‌ಸಿ) ತಿಂಗಳೊಳಗೆ ನೋಟೀಸಿಗೆ ಉತ್ತರಿಸುವಂತೆ ಗೃಹ ಸಚಿವಾಲಯಕ್ಕೆ ಆದೇಶ ನೀಡಿದೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಲದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಅರಣ್ಯದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ನಕ್ಸಲರನ್ನು ಭದ್ರತಾ ಸಿಬ್ಬಂದಿಗಳು ಬಿದಿರಿನ ಬೊಂಬಿನಲ್ಲಿ ಹೊತ್ತೊಯ್ದ ದೃಶ್ಯಗಳನ್ನು ಕಂಡಿದ್ದ ಗೃಹ ಸಚಿವ ಪಿ. ಚಿದಂಬರಂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇದೀಗ ಸ್ಮರಿಸಿಕೊಳ್ಳಬಹುದಾಗಿದೆ.

ಆದರೂ ಈ ಕುರಿತು ಗೃಹ ಸಚಿವಾಲಯವು ತನ್ನ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ಆಯೋಗ ಬಯಸಿದೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಚಿತ್ರಗಳು ನಿಜವೇ ಆಗಿದ್ದರೆ, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಶ್ನೆಗಳು ಏಳುತ್ತವೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.

ಜೂನ್ 18ರಂದು ಈ ಚಿತ್ರಗಳು ಪ್ರಕಟವಾಗಿದ್ದವು. ಮಿಡ್ನಾಪುರದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಬಲಿಯಾದವರನ್ನು ಈ ರೀತಿ ತೆಗೆದುಕೊಂಡು ಹೋಗಲಾಗಿತ್ತು ಎಂದು ಆರೋಪಿಸಲಾಗಿತ್ತು. ಆ ವರದಿ ನಿಜವೇ ಆಗಿದ್ದರೆ ಇದು ಗಂಭೀರ ಪ್ರಕರಣವಾಗಿದೆ. ಈ ಸಂಬಂಧ ಜುಲೈ 27ರೊಳಗೆ ಸ್ಪಷ್ಟನೆ ನೀಡುವಂತೆ ಗೃಹ ಸಚಿವಾಲಯಕ್ಕೆ ನೋಟೀಸ್ ನೀಡಲಾಗಿದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜೂನ್ 16ರಂದು ಮಿಡ್ನಾಪುರದ ಸಲ್ಬೋನಿಯ ರಾಂಜಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಎನ್‌ಕೌಂಟರ್‌ಗೆ ಮೂವರು ಮಹಿಳೆಯರೂ ಸೇರಿದಂತೆ 12 ಮಾವೋವಾದಿಗಳು ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ