ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಗ್ಗೊಲೆ ನಿರತ ನಕ್ಸಲರಿಂದ ಐದು ರಾಜ್ಯಗಳಲ್ಲಿ ಬಂದ್ (Maoist bandh | Jharkhand | West Bengal | Chhattisgarh)
Bookmark and Share Feedback Print
 
ಮಾವೋವಾದಿಗಳೀಗ ಭಯೋತ್ಪಾದಕರಿಗಿಂತಲೂ ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ. ಸಿಕ್ಕಸಿಕ್ಕಲ್ಲಿ ಅಮಾಯಕರನ್ನು ತರಿಯುತ್ತಿದ್ದಾರೆ. ಆ ಮೂಲಕ ಐದು ರಾಜ್ಯಗಳಲ್ಲಿನ ತಮ್ಮ ಎರಡು ದಿನಗಳ ಬಂದ್‌ಗೆ ನಕ್ಸಲರು ಬುಧವಾರ ಬೆಳಕು ಹರಿಯುವ ಮೊದಲೇ ಚಾಲನೆ ನೀಡಿದ್ದಾರೆ.

ನಿನ್ನೆಯಷ್ಟೇ ಛತ್ತೀಸ್‌ಗಢದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ 27 ಮಂದಿಯನ್ನು ಕ್ರೂರವಾಗಿ ಗುಂಡಿಟ್ಟು ಕೊಂದಿದ್ದರು. ಅದರ ಬೆನ್ನಿಗೆ ರಾತ್ರಿ ಎಂಟು ಗಂಟೆ ಹೊತ್ತಿಗೆ ಜಾರ್ಖಂಡ್ ಕಾಂಗ್ರೆಸ್ ಮುಖಂಡರೊಬ್ಬರನ್ನು ಅಪಹರಿಸಿ ಹತ್ಯೆಗೈಯಲಾಗಿದೆ.

ಇದರೊಂದಿಗೆ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಜಾರ್ಖಂಡ್, ಪಶ್ಚಿಮ ಬಂಗಾಲ, ಒರಿಸ್ಸಾ, ಛತ್ತೀಸ್‌ಗಢ ಮತ್ತು ಬಿಹಾರಗಳಲ್ಲಿ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ಹಿಂಸಾಪೂರಿತ ಬಂದ್‌ಗೆ ಚಾಲನೆ ದೊರೆತಿದ್ದು, ಇದು ನಾಳೆ ಮಧ್ಯರಾತ್ರಿ ಅಂತ್ಯಗೊಳ್ಳಲಿದೆ.

ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಬಾರ್ಕೋಲ್ ಗ್ರಾಮದಲ್ಲಿನ ಸ್ಥಳೀಯ ಬುಡಕಟ್ಟು ಮುಖಂಡ ಬರ್ಧನ್ ಕಚ್ಚು (45) ಎಂಬಾತನನ್ನು ಮಾವೋವಾದಿಗಳು ನಿನ್ನೆ ರಾತ್ರಿ ಅಪಹರಿಸಿದ್ದರು. ನಂತರ ಆತನನ್ನು ಕೊಂದು ಹಾಕಿದ್ದಾರೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ರಿಚರ್ಡ್ ಲಾಕ್ರಾ ತಿಳಿಸಿದ್ದಾರೆ.

ಖನಿಜ ಶ್ರೀಮಂತ ರಾಜ್ಯಗಳ ಗಣಿಗಾರಿಕಾ ಚಟುವಟಿಕೆ ಮೇಲೆ ಪರಿಣಾಮ ಬೀರುವಂತೆ ಈ ವರ್ಷ ಮಾವೋವಾದಿಗಳು ಕರೆ ನೀಡುತ್ತಿರುವ ಐದನೇ 48 ಗಂಟೆಗಳ ಬಂದ್ ಇದಾಗಿದೆ.

ನಕ್ಸಲರಿಂದ ಎದುರಾಗುವ ಸಂಭಾವ್ಯ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವು ರಾಜ್ಯಗಳಲ್ಲಿ ರೈಲುಗಳ ಸಂಚಾರವನ್ನು ಬದಲಾವಣೆ ಅಥವಾ ರದ್ದುಗೊಳಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ರಾಂಚಿ-ದೆಹಲಿ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್, ರಾಂಚಿ-ವಾರಣಾಸಿ ಇಂಟರ್-ಸಿಟಿ, ಸಂಬಾಲ್ಪುರ್-ವಾರಣಾಸಿ ಇಂಟರ್-ಸಿಟಿ ರೈಲುಗಳನ್ನು ಗೋಮೋ-ಗಯಾ-ಮುಘಲ್ಸಾರೈ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಅಲ್ಲದೆ ಹೊಸ ಆದೇಶದ ಪ್ರಕಾರ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಚರಿಸುವ ರೈಲುಗಳು ಹೆಚ್ಚಿನ ಮುತುವರ್ಜಿವಹಿಸಬೇಕು ಮತ್ತು ಗರಿಷ್ಠ ವೇಗಕ್ಕೆ ಮಿತಿ ಹಾಕಲಾಗಿದೆ. ಕೆಲವು ದಿನಗಳವರೆಗೆ 65 ಕಿಲೋ ಮೀಟರ್ ವೇಗವನ್ನು ಮೀರಬಾರದು ಎಂದು ಇಲಾಖೆ ಮಿತಿ ಹೇರಿದೆ.

ಈ ಪ್ರದೇಶಗಳಲ್ಲಿ ಚಲಿಸುವ ರೈಲುಗಳಲ್ಲಿ ಸಿಆರ್‌ಪಿಎಫ್ ಸೇರಿದಂತೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಉಳಿದಂತೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿಯೂ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರದಿಂದ ಸುರಕ್ಷತೆಯನ್ನು ಖಚಿತಪಡಿಸುತ್ತಿದ್ದಾರೆ.

ಆದರೂ ನಕ್ಸಲ್ ದಾಳಿ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಕಡೆ ಬಸ್ಸುಗಳು, ಟ್ರಕ್ಕುಗಳು ಸೇರಿದಂತೆ ಇತರ ವಾಹನಗಳು ರಸ್ತೆಗಿಳಿದಿಲ್ಲ ಎಂದು ವರದಿಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ