ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದುರ್ಬಲವಾಗುತ್ತಿರುವ ಸಿದ್ಧಾಂತ; ಬಿಜೆಪಿಗೆ ಆರೆಸ್ಸೆಸ್ ತರಾಟೆ (RSS | BJP | L K Advani | Nitin Gadkari)
Bookmark and Share Feedback Print
 
ಬಿಜೆಪಿಯಲ್ಲಿ ಪರಸ್ಪರ ಸಂವಹನ ಕೊರತೆ, ಭಿನ್ನ ಅಭಿಪ್ರಾಯಗಳ ಮಂಡನೆ, ರಾಷ್ಟ್ರೀಯತಾ ಸಿದ್ಧಾಂತ ದುರ್ಬಲಗೊಳ್ಳುತ್ತಿರುವುದು ಮತ್ತು ಪ್ರಭಾವಿ ವಿರೋಧ ಪಕ್ಷವಾಗಿ ವರ್ತಿಸಲು ವಿಫಲವಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳಿವೆ ಎಂದು ಬೆಟ್ಟು ಮಾಡಿ ತೋರಿಸಿರುವ ಉನ್ನತ ಆರೆಸ್ಸೆಸ್ ಮುಖಂಡರು ಪಕ್ಷದ ನಾಯಕತ್ವವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿಯ ಅಗ್ರ ನಾಯಕರೊಂದಿಗಿನ ಸುಮಾರು ಎಂಟು ಗಂಟೆಗಳಷ್ಟು ಸುದೀರ್ಘ ಅವಧಿಯ ಈ ಸಭೆಯಲ್ಲಿ ಆರೆಸ್ಸೆಸ್‌ನ ಭೈಯ್ಯಾಜಿ ಜೋಷಿ, ಮದನ್‌ದಾಸ್ ದೇವಿ ಮತ್ತು ಸುರೇಶ್ ಸೋನಿ ಮುಂದಾದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಬಿಜೆಪಿಯು ತನ್ನ ಕಾರ್ಯನಿರ್ವಹಣೆಯಲ್ಲಿ ಮೂಲ ಸಿದ್ಧಾಂತದಿಂದ ಹಿಂದಕ್ಕೆ ಸರಿಯುತ್ತಿರುವುದು ಸಂಘ ಪರಿವಾರಕ್ಕೆ ಅಸಮಾಧಾನವಾಗಿದೆ ಎಂಬುದನ್ನು ಖಾರವಾಗಿ ಮನದಟ್ಟು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಎಲ್.ಕೆ. ಅಡ್ವಾಣಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಮುರಳಿ ಮನೋಹರ ಜೋಷಿ ಮತ್ತು ಅನಂತ ಕುಮಾರ್ ಸೇರಿದಂತೆ ಬಿಜೆಪಿಯ ಹಲವು ಉನ್ನತ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಆರು ತಿಂಗಳ ಹಿಂದಷ್ಟೇ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಗಡ್ಕರಿಯವರ ನಿರ್ವಹಣೆಯ ಪ್ರಗತಿಯನ್ನೂ ಆರೆಸ್ಸೆಸ್ ಪರಿಶೀಲನೆ ನಡೆಸಿದೆ.

ಬಿಜೆಪಿಯ ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸುವುದು ಮತ್ತು ನಾಯಕರು ಸಾರ್ವಜನಿಕವಾಗಿ ಪ್ರಮುಖ ವಿಚಾರಗಳ ಬಗ್ಗೆ ಭಿನ್ನ ರೀತಿಯ ಹೇಳಿಕೆಗಳನ್ನು ನೀಡುವುದರಿಂದ ಹೊರಗುಳಿಯಬೇಕು ಎಂದೂ ಆರೆಸ್ಸೆಸ್ ಒತ್ತಿ ಹೇಳಿದೆ ಎಂದು ಪಕ್ಷದ ನಾಯಕರೊಬ್ಬರು ವಿವರಿಸಿದ್ದಾರೆ.

ಈಗ ನಡೆದಿರುವ ಸಭೆ ಸಾಮಾನ್ಯವಾಗಿ ನಡೆಯುವ ಸಭೆಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ಮತ್ತು ಮಾವೋವಾದಿಗಳ ಸಮಸ್ಯೆ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಬಿಜೆಪಿಯನ್ನು ಬಲಗೊಳಿಸುವುದು ಮತ್ತು ರಾಷ್ಟ್ರೀಯ ಸಿದ್ಧಾಂತದ ಮುಂದಿನ ಹಾದಿಯ ಕುರಿತು ನಾವು ಸಮಾಲೋಚನೆ ನಡೆಸಿದೆವು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ