ಬಾಡಿಗೆ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದ ಬ್ರೆಜಿಲ್ ಯುವತಿಯೊಬ್ಬಳಿಗೆ ಮನೆ ಮಾಲಕ ಕಾಫಿಯಲ್ಲಿ ಅಮಲು ಪದಾರ್ಥ ಬೆರೆಸಿ ನಿರಂತರ ಅತ್ಯಾಚಾರ ನಡೆಸಿದ ಹೀನ ಕೃತ್ಯವೊಂದು ರಾಜಧಾನಿಯಿಂದ ವರದಿಯಾಗಿದೆ.
ಆರೋಪಿಯನ್ನು 42 ವರ್ಷದ ಅಮರದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತ ದೆಹಲಿಯಲ್ಲಿ ರಿಯಲ್ ಎಸ್ಟೇಟ್ ಮತ್ತು ಹಣಕಾಸು ವಿನಿಮಯ ವ್ಯಾಪಾರ ಮಾಡುತ್ತಿದ್ದ ಎಂದು ವರದಿಗಳು ತಿಳಿಸಿವೆ.
27ರ ಹರೆಯದ ಬ್ರೆಜಿಲ್ ಯುವತಿ ನೀಡಿದ ದೂರಿನಂತೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅತ್ಯಾಚಾರ ಎಸಗಿರುವುದು ಖಚಿತವಾಯಿತು. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯಲ್ಲಿನ ಚಿತ್ತರಂಜನ್ ಪಾರ್ಕ್‌ನಲ್ಲಿ ಪ್ರಕರಣ ದಾಖಲಾಗಿದ್ದು, ನೋಯ್ಡಾದಲ್ಲಿ ಘಟನೆ ನಡೆದಿದೆ. ತನಗೆ ಕಾಫಿಯಲ್ಲಿ ಮತ್ತು ಬರುವ ಔಷಧಿಯನ್ನು ಮಿಶ್ರಣ ಮಾಡಿ ಮನೆ ಮಾಲಿಕ ಕುಡಿಸಿ ನಂತರ ಎರಡು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ನೋಯ್ಡಾದಲ್ಲಿನ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಸಮೂಹ ಮಾಧ್ಯಮ ಕೋರ್ಸ್ ಅಧ್ಯಯನ ಮಾಡುತ್ತಿರುವ ಯುವತಿ, ಜೂನ್ ಮೊದಲ ವಾರದಲ್ಲಿ ಭಾರತಕ್ಕೆ ಬಂದಿದ್ದಳು. ಜೂನ್ 19ರಿಂದ ಆಕೆ ಇಲ್ಲಿನ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಳು.
ಜೂನ್ 20ರಂದು ಆಕೆಯ ಕೋಣೆಗೆ ಬಂದಿದ್ದ ಮನೆ ಮಾಲೀಕ ಭೇಟಿ ಮಾಡಿದ್ದಲ್ಲದೆ, ಕಾಫಿ ಕೊಟ್ಟಿದ್ದ. ಕಾಫಿ ಕುಡಿಯುತ್ತಿದ್ದಂತೆ ಯುವತಿ ಪ್ರಜ್ಞೆ ಕಳೆದುಕೊಂಡಿದ್ದಳು. ನಂತರ ಆತ ಅತ್ಯಾಚಾರ ಎಸಗಿದ್ದ. ಮರುದಿನ ಅಂದರೆ ಜೂನ್ 21ರಂದೂ ಮತ್ತೆ ಅತ್ಯಾಚಾರ ಎಸಗಿದ್ದಾನೆ.
ಜೂನ್ 27ರಂದು ಮಗದೊಮ್ಮೆ ಯತ್ನಿಸಿದಾಗ ಯುವತಿ ಪ್ರತಿಭಟಿಸಿದ್ದಳು. ನಂತರ ಆಕೆ ಚಿತ್ತರಂಜನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.