ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಗಲಭೆ ಹಿಂದೆ ಪಾಕಿಸ್ತಾನದ ಲಷ್ಕರ್: ಚಿದಂಬರಂ (P. Chidambaram | Pakistan | Lashkar-e-Taiba | Kashmir)
Bookmark and Share Feedback Print
 
ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ಕೈವಾಡವಿದೆ ಎಂದು ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಲ್ಲು ತೂರಾಟ ಪ್ರಕರಣಗಳಿಗೆ ಪ್ರತ್ಯುತ್ತರವಾಗಿ 11 ನಾಗರಿಕರು ಬಲಿಯಾಗಿರುವುದರ ಹಿಂದೆ ಲಷ್ಕರ್ ಇ ತೋಯ್ಬಾಕ್ಕೆ ಸಂಬಂಧಿಸಿದ ರಾಷ್ಟ್ರ ವಿರೋಧಿ ಶಕ್ತಿಗಳಿವೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಕಣಿವೆ ರಾಜ್ಯದಲ್ಲಿ ಕಳೆದ ಹಲವು ಸಮಯಗಳಿಂದ ಭದ್ರತಾ ಪಡೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಕಲ್ಲು ತೂರಾಟಗಳು ನಡೆಯುತ್ತಿದ್ದು, ಉತ್ತರ ಕಾಶ್ಮೀರದ ಸೋಪೋರೆ ನಗರದಲ್ಲಿ ಹೆಚ್ಚು ವರದಿಯಾಗಿದೆ. ಇಲ್ಲಿ ಲಷ್ಕರ್ ಪ್ರಭಾವ ಹೆಚ್ಚಿದೆ. ಇದೇ ಪ್ರದೇಶದಲ್ಲಿ ಜೂನ್ 25ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿತ್ತು ಎಂದು ಚಿದಂಬರಂ ವಿವರಣೆ ನೀಡಿದ್ದಾರೆ.

ನೇರವಾಗಿ ಭದ್ರತಾ ಪಡೆಗಳ ವಿರುದ್ಧ ಕದನಕ್ಕಿಳಿಯುವ ಬದಲು ಸ್ಥಳೀಯ ಯುವಕರನ್ನು ಕೆರಳಿಸುವ ಮೂಲಕ ಭಯೋತ್ಪಾದಕ ಸಂಘಟನೆಗಳು ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿದ ನಂತರ ಚಿದಂಬರಂ ಮಾತನಾಡುತ್ತಿದ್ದರು. ರಕ್ಷಣಾ ಸಚಿವ ಎ.ಕೆ. ಆಂಟನಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಸೇರಿದಂತೆ ಭದ್ರತಾ ಇಲಾಖೆಗಳ ಹಲವು ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರುಕಳಿಸಲು ಸರಕಾರ ಬದ್ಧವಾಗಿದೆ ಎಂಬ ಮಾತನ್ನು ಪುನರುಚ್ಛರಿಸಿದ ಅವರು, ಈ ಬಗ್ಗೆ ಯಾವುದೇ ರೀತಿಯ ಸಹಕಾರವನ್ನು ರಾಜ್ಯ ಸರಕಾರಕ್ಕೆ ನೀಡಲು ಸಿದ್ಧ; ನಿರ್ಬಂಧವನ್ನು ವಿಸ್ತರಿಸುವ ಮನವಿಯೂ ಭದ್ರತಾ ಪಡೆಗಳಿಂದ ಬಂದಿದೆ. ಹಾಗಾಗಿ ಇದೀಗ ಅಶಾಂತಿ ನೆಲೆಸಿರುವ ಪ್ರದೇಶಗಳಿಗೂ ನಿಷೇಧಾಜ್ಞೆ ವಿಸ್ತರಿಸಲಾಗುತ್ತದೆ ಎಂದರು.

ಕಳೆದ ಹಲವು ವರ್ಷಗಳಿಂದ ಭದ್ರತಾ ಪಡೆಗಳು ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ಘರ್ಷಣೆಗಳು ನಡೆಯುತ್ತಿದ್ದವಾದರೂ, ಇದೀಗ ಭಾರೀ ಪ್ರಮಾಣದಲ್ಲಿ ಕಲ್ಲು ತೂರಾಟ ಪ್ರಕರಣಗಳು ವರದಿಯಾಗುತ್ತಿವೆ. ಇದರಲ್ಲಿ ಹೆಚ್ಚು ತೊಡಗಿಸಿಕೊಳ್ಳುವವರು ಹದಿ ಹರೆಯದ ಹುಡುಗರು. ಈ ನಿಟ್ಟಿನಲ್ಲಿ ನಿಷೇಧಾಜ್ಞೆಯಿರುವ ಪ್ರದೇಶಗಳ ಹೆತ್ತವರು ತಮ್ಮ ಮಕ್ಕಳನ್ನು ಬೀದಿಗಳಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ನಿನ್ನೆಯಷ್ಟೇ ಮನವಿ ಮಾಡಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ