ಹೀಗೊಂದು ನಡೆಯಬಾರದ ಪ್ರಸಂಗ ನಡೆದು ಹೋಗಿದೆ. ಮೊದಲ ಗಂಡ ವಾಪಸ್ ಬರುತ್ತಿದ್ದಾನೆ ಎಂಬ ಸುದ್ದಿ ಕಿವಿಗೆ ಬಿದ್ದ ನಂತರ ಮತ್ತೊಂದು ಮದುವೆಯಾಗಿರುವ ಪತ್ನಿ ದಿಕ್ಕು ತೋಚದಂತಾಗಿದ್ದಾಳೆ. ಅದರಲ್ಲೂ ಗಂಡನ ಸಹೋದರನನ್ನೇ ಮದುವೆಯಾಗಿದ್ದ ಪ್ರಕರಣವಿದು.
ಇದು ನಡೆದಿರುವುದು ಉತ್ತರ ಪ್ರದೇಶದಲ್ಲಿ. ಸಹೋದರರ ಪತ್ನಿಯಾಗಿ ಬದಲಾದವಳ ಹೆಸರು ಫೂಲ್ ಕುಮಾರಿ. ಮೊದಲ ಗಂಡ ಶಂಭೂ ರಾಮ್‌ನನ್ನು ಪಾಕಿಸ್ತಾನವು ಬಂಧಿಸಿದ ನಂತರ ಆಕೆ ಹಿರಿಯರ ಒತ್ತಾಯಕ್ಕೆ ಮಣಿದು ಆತನ ತಮ್ಮ ರಾಜೇಶ್ವರ್‌ನನ್ನು ವರಿಸಿದ್ದಳು. ಮೊದಲ ಗಂಡನಿಂದ ಒಬ್ಬಳು ಮಗಳು, ಇದೀಗ ಎರಡನೇ ಗಂಡನಿಂದ ನಾಲ್ಕು ತಿಂಗಳ ಗಂಡು ಮಗುವನ್ನೂ ಕುಮಾರಿ ಪಡೆದಿದ್ದಾಳೆ.
ಇತ್ತೀಚೆಗಷ್ಟೇ ಪಾಕಿಸ್ತಾನವು ಶಂಭೂ ರಾಮ್‌ನನ್ನು ಬಿಡುಗಡೆ ಮಾಡುವುದರೊಂದಿಗೆ ಕುಮಾರಿಯ ಹಣೆಬರಹವೂ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಆಕೆ ತೀರಾ ಗೊಂದಲಕ್ಕೆ ಬಿದ್ದಿದ್ದಾಳೆ.
ಇದ್ದಕ್ಕಿದ್ದಂತೆ ಕಾಣೆಯಾಗಿದ್ದ... ಶಂಭೂ ರಾಮ್ 2002ರಲ್ಲಿ ಫೂಲ್ ಕುಮಾರಿಯನ್ನು ಮದುವೆಯಾಗಿದ್ದ. ಆ ಸಂದರ್ಭದಲ್ಲಿ ಆತ ದೆಹಲಿಯಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಅಲ್ಲಿಂದ ಕುಶಿನಗರ ಜಿಲ್ಲೆಯ ತನ್ನ ಲಖೀಂಪುರ್ ಗ್ರಾಮಕ್ಕೆ ಮರಳಿ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ. ಆ ಹೊತ್ತಲ್ಲಿ ಕುಮಾರಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಳು.
ಐವರು ಸಹೋದರರಿಗೆ ಬೇಸಾಯ ಮಾಡುವಷ್ಟು ಜಮೀನು ಕುಟುಂಬದಲ್ಲಿ ಇರದೇ ಇದ್ದ ಕಾರಣ ಕುಮಾರಿ ಗಂಡ ರಾಮ್ ತೀರಾ ಖಿನ್ನನಾಗಿದ್ದ. ಅಲ್ಲದೆ ಅಸಹಜ ವರ್ತನೆ ತೋರಿಸಲಾರಂಭಿಸಿದ್ದ. ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ರಾಮ್, 'ಕೆಲಸಕ್ಕಾಗಿ ಹೋಗುತ್ತಿದ್ದೇನೆ, 10-15 ದಿನ ಬಿಟ್ಟು ಬರುತ್ತೇನೆ' ಎನ್ನುತ್ತಿದ್ದ.
ಇದೇ ರೀತಿ ಒಂದು ಬಾರಿ ಹೋಗಿದ್ದವನು ವಾಪಸ್ ಬಂದಿರಲಿಲ್ಲ. ಕಾದು ಕಾದು ಸುಸ್ತಾಗಿದ್ದ ಪತ್ನಿ ಮತ್ತು ಕುಟುಂಬಕ್ಕೆ 'ಆತ ಪಾಕಿಸ್ತಾನದ ಲಾಹೋರ್ ಸೆಂಟ್ರಲ್ ಜೈಲಿನಲ್ಲಿದ್ದಾನೆ' ಎಂದು ಸುಮಾರು ಎರಡು ವರ್ಷಗಳ ನಂತರ ಸ್ಥಳೀಯ ಬೇಹುಗಾರಿಕಾ ಇಲಾಖೆಯು ಆಘಾತಕಾರಿ ಮಾಹಿತಿಯನ್ನು ನೀಡಿತ್ತು.
ಈ ಹೊತ್ತಲ್ಲಿ ರಾಮ್ ಕುಟುಂಬವು ಪ್ರಧಾನ ಮಂತ್ರಿ, ವಿದೇಶಾಂಗ ಸಚಿವರು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಯವರಿಗೆ ಹಲವು ಪತ್ರಗಳನ್ನು ಬರೆದಿತ್ತು. ತನ್ನ ಗಂಡನನ್ನು ಪಾಕಿಸ್ತಾನದಿಂದ ಬಿಡಿಸಿಕೊಡುವಂತೆ ಕುಮಾರಿ ಗೋಗರೆದಿದ್ದಳು. ಆದರೆ ಯಾವುದೇ ಚಿಕ್ಕ ಭರವಸೆಯೂ ಸರಕಾರದ ಕಡೆಯಿಂದ ಬಂದಿರಲಿಲ್ಲ.
ಗಂಡನ ತಮ್ಮನನ್ನೇ ಮದುವೆಯಾದಳು... ಗಂಡ ರಾಮ್ ಬಿಡುಗಡೆಯಾಗುವ ಯಾವುದೇ ಸಾಧ್ಯತೆಗಳಿಲ್ಲ. ಯಾಕೆಂದರೆ ಪಾಕಿಸ್ತಾನವು ಭಾರತೀಯರನ್ನು ಬಿಡುಗಡೆ ಮಾಡುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನೀನು ರಾಮ್ ಸಹೋದರ ರಾಜೇಶ್ವರ್‌ನನ್ನು ಮದುವೆಯಾಗಬೇಕು ಎಂದು ಹಿರಿಯರು ನಿರ್ಧರಿಸಿದ್ದರು.
ಅದರಂತೆ ಅನಿವಾರ್ಯವಾಗಿ ಕುಮಾರಿ ತನ್ನ ಗಂಡ ರಾಮ್ ಸಹೋದರ ರಾಜೇಶ್ವರ್‌ನ್ನು ಮದುವೆಯಾಗಿದ್ದಳು. ಅವರಿಗೀಗ ನಾಲ್ಕು ತಿಂಗಳ ಗಂಡು ಮಗುವೂ ಆಗಿದೆ.
ರಾಮ್ ಆಸ್ಪತ್ರೆಯಲ್ಲಿದ್ದಾನೆ... ಕಳೆದ ವಾರವಷ್ಟೇ ಪಾಕಿಸ್ತಾನವು ಸೌಹಾರ್ದಯುತ ಮಾತುಕತೆಯ ಅಂಗವಾಗಿ 17 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕುಮಾರಿ ಮೊದಲ ಗಂಡ ರಾಮ್ ಕೂಡ ಸೇರಿದ್ದ.
ವೈದ್ಯರ ಪ್ರಕಾರ ರಾಮ್ ಮನೋವ್ಯಾಧಿಯಿಂದ (schizophrenia) ಬಳಲುತ್ತಿದ್ದಾನೆ. ಹಾಗಾಗಿ ಅಮೃತಸರದ ಮಾನಸಿಕ ಅಸ್ವಸ್ಥರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಮನೆಗೆ ಕರೆ ತರಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಮತ್ತೊಬ್ಬ ತಮ್ಮ ರಾಮ್ ಚಂದರ್ ಅಮೃತಸರಕ್ಕೆ ಹೋಗಿದ್ದಾನೆ.
ಎಲ್ಲಾ ದೇವರ ಕೈಯಲ್ಲಿದೆ: ಕುಮಾರಿ ಮೊದಲ ಗಂಡ ವಾಪಸ್ ಬಂದಿರುವ ಸುದ್ದಿಯನ್ನು ಕೇಳಿರುವ ಕುಮಾರಿ ಈಗ ದಾರಿ ಕಾಣದಂತಾಗಿದ್ದಾಳೆ. ಎಲ್ಲವೂ ದೇವರ ಕೈಯಲ್ಲಿದೆ ಎಂದು ಕೈ ಚೆಲ್ಲಿ ಕುಳಿತಿದ್ದಾಳೆ.
ಎರಡನೇ ಗಂಡ ರಾಜೇಶ್ವರ್ ತನ್ನ ಪತ್ನಿಯನ್ನು ಅಣ್ಣನಿಗೆ ಬಿಟ್ಟುಕೊಡಲು ಸಿದ್ಧನಾಗಿದ್ದಾನೆ. 'ಶಂಭೂ ರಾಮ್ ಮಾನಸಿಕವಾಗಿ ಅತ್ಯುತ್ತಮ ಸ್ಥಿತಿಯನ್ನು ಹೊಂದಿದ್ದರೆ, ಆತ ತನ್ನ ಕುಟುಂಬವನ್ನು ಮರಳಿ ಸ್ವೀಕರಿಸಲು ಸಿದ್ಧನಿದ್ದರೆ ನಾನು ಅದಕ್ಕೆ ಅಡ್ಡ ಬರಲಾರೆ' ಎಂದು ಹೇಳುತ್ತಾನೆ.
ನಾನು ಎರಡು ವರ್ಷಗಳ ಹಿಂದೆ ಊರಿಗೆ ಬಂದದ್ದೇ ಸಂಕಷ್ಟದಲ್ಲಿದ್ದ ಕುಟುಂಬವನ್ನು ಸಂತೈಸಲು. ಆದರೆ ಹಿರಿಯರು ಕುಮಾರಿಯನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದರಿಂದ ನನಗಿಂತ ಎರಡು ವರ್ಷ ಹಿರಿಯಳಾದರೂ ಆಕೆಯನ್ನು ಮದುವೆಯಾದೆ. ಅಣ್ಣನ ಮಗಳನ್ನು ನನ್ನ ಮಗಳಂತೆಯೇ ನೋಡಿಕೊಂಡೆ. ಅಣ್ಣನ ಬೇಸಾಯವನ್ನೂ ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ರಾಜೇಶ್ವರ್ ವಿವರಿಸುತ್ತಾನೆ.