ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೀಸಲು ಪೊಲೀಸರು ಬ್ರಾಯ್ಲರ್ ಚಿಕನ್ ಇದ್ದಂತೆ: ನಕ್ಸಲರು (CRPF jawans | broiler chicken | Maoists | Chhattisgarh)
Bookmark and Share Feedback Print
 
ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಅರೆ ಬೆಂದ ಬ್ರಾಯ್ಲರ್ ಚಿಕನ್ ಇದ್ದಂತೆ, ಹಾಗಾಗಿ ನಮಗೆ ಬೇಟೆಯಾಡುವುದು ಸುಲಭ ಎಂದು ಮಾವೋವಾದಿಗಳು ಸಿಆರ್‌ಪಿಎಫ್ ಪಡೆಗಳನ್ನು ಲೇವಡಿ ಮಾಡಿದ್ದಾರೆ.

ಅವರೊಂದು ರೀತಿಯಲ್ಲಿ ಫಾರ್ಮ್ ಕೋಳಿಗಳಿದ್ದ ಹಾಗೆ. ಭಾರೀ ಸಂಖ್ಯೆಯಲ್ಲಿ ಒಂದೇ ವ್ಯಾನಿನಲ್ಲಿ ಕರೆದೊಯ್ಯಲಾಗುತ್ತದೆ. ನಮಗದು ಬೇಟೆಗೆ ಸುಲಭವಾಗುತ್ತದೆ. ಹಾಗಾಗಿ ಗುಂಪು ಗುಂಪಾಗಿದ್ದವರನ್ನು ಒಟ್ಟಿಗೆ ಹಿಡಿದು ಕೊಂದು ಹಾಕಿ ಎಂದು ನಕ್ಸಲ್ ನಾಯಕರು ತಮ್ಮ ಗೆರಿಲ್ಲಾ ಗುಂಪುಗಳಿಗೆ ಕರೆ ನೀಡಿದ್ದಾರೆ.

ದಟ್ಟ ಅರಣ್ಯ ಪ್ರದೇಶದಲ್ಲಿ ಗುಂಪು ಗುಂಪಾಗಿ ಕಾರ್ಯಾಚರಣೆಗೆ ತೆರಳುವ ಸಿಆರ್‌ಪಿಎಫ್ ಸಿಬ್ಬಂದಿಗಳು ಗೆರಿಲ್ಲಾ ತಂತ್ರ ಅನುಸರಿಸುವ ಮಾವೋವಾದಿಗಳಿಗೆ ಸುಲಭ ತುತ್ತಾಗುತ್ತಿರುವುದು, ಜತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗಿರುವುದು ಇತ್ತೀಚಿನ ಹಲವು ಘಟನೆಗಳಲ್ಲಿ ರುಜುವಾತಾಗಿದೆ.

ಇಲ್ಲಿ ಪ್ರಮುಖವಾಗಿ ಕಂಡು ಬರುತ್ತಿರುವ ಸಮಸ್ಯೆಯೆಂದರೆ ಸಿಆರ್‌ಪಿಎಫ್ ಸಿಬ್ಬಂದಿಗಳಿಗೆ ಪೂರಕ ತರಬೇತಿ ಮತ್ತು ಮಾಹಿತಿಗಳು ಇಲ್ಲದೇ ಇರುವುದು. ಜನಸಂದಣಿಯಲ್ಲಿ ನಡೆಯುವ ಗಲಭೆಗಳನ್ನು ನಿಯಂತ್ರಿಸಲು ಅಥವಾ ಉಗ್ರರನ್ನು ಸದೆಬಡಿಯಲು ಪ್ರಾಥಮಿಕ ಹಂತದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಈ ಮೀಸಲು ಪೊಲೀಸರಿಗೆ ಅರಣ್ಯ ಪ್ರದೇಶದಲ್ಲಿ ನಡೆಸುವ ಕಾರ್ಯಾಚರಣೆ ಅರಿವಿನ ಕೊರತೆಯಿದೆ ಎಂದು ಇತ್ತೀಚೆಗಷ್ಟೇ ಉನ್ನತ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಆಗಿಂದಾಗ್ಗೆ ನಕ್ಸಲರು ಗೆರಿಲ್ಲಾ ತಂತ್ರಗಳನ್ನು ಬಳಸಿ ದಾಳಿ ಮಾಡುತ್ತಿರುವುದರಿಂದ ಸಿಆರ್‌ಪಿಎಫ್ ಸಿಬ್ಬಂದಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರನ್ನು ಒತ್ತಾಯಪೂರ್ವಕವಾಗಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗುತ್ತದೆ. ಇದು ಕೂಡ ಮಾವೋವಾದಿಗಳಿಗೆ ಪರೋಕ್ಷವಾಗಿ ಸಹಕಾರವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ಎರಡು-ಮೂರು ತಿಂಗಳುಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಬಲಿಯಾಗಿರುವುದೇ ಇದಕ್ಕೆ ಸಾಕ್ಷಿ. ಇದನ್ನೇ ತಮ್ಮ ಗೆಲುವೆಂದು ಪರಿಗಣಿಸಿರುವ ನಕ್ಸಲರು, ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಗುಂಪು ಗುಂಪಾಗಿ ನಿರ್ಬಂಧಿಸಿ ತರಿದು ಹಾಕಿ ಎಂದು ಸದಸ್ಯರಿಗೆ ಕರೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ