ತನ್ನ ಆಪ್ತೆ ನಾಡಿಯಾ ಟೊರಾಡೋ ಸಾವಿನ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಗೋವಾ ಪ್ರವಾಸೋದ್ಯ ಮಾಜಿ ಸಚಿವ ಫ್ರಾನ್ಸಿಸ್ಕೋ ಮಿಕ್ಕಿ ಪಾಚೆಕೊ ಅವರಿಗೆ ನಿರಾಸೆಯಾಗಿದೆ. ಆರೋಪಿ ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವುದರಿಂದ ಜಾಮೀನು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿದೆ.
ನಾಡಿಯಾ ಜತೆಗೆ ಸಂಬಂಧ ಹೊಂದಿದ್ದ ಹೊರತಾಗಿಯೂ ಆಕೆಯ ಹತ್ಯಾ ಪ್ರಕರಣದಲ್ಲಿ ತಾನು ಭಾಗಿಯಲ್ಲ ಎಂಬ ಮಾಜಿ ಸಚಿವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಆರ್.ಎಂ. ಲೋಧಾ ಮತ್ತು ಎ.ಕೆ. ಪಟ್ನಾಯಕ್ ಅವರನ್ನೊಳಗೊಂಡ ಪೀಠವು, ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ತಿಳಿಸಿತು. ಪಾಚೆಕೊ ಆಪ್ತ ಸಹಾಯಕ ಹಾಗೂ ಪ್ರಕರಣದ ಆರೋಪಿ ಲಿಂಡನ್ ಮೊಂಟೇರಿಯೋ ಅರ್ಜಿಯನ್ನೂ ನ್ಯಾಯಾಲಯ ತಳ್ಳಿ ಹಾಕಿದೆ.
ಪಾಚೆಕೊ ಅವರು ಪ್ರಭಾವಿ ರಾಜಕಾರಣಿಯಾಗಿರುವುದು ಮತ್ತು ಸಾವನ್ನಪ್ಪಿದ ಯುವತಿಯ ದೇಹದ ವಿವಿಧ ಭಾಗಗಳಲ್ಲಿ 13-14 ಜಜ್ಜಿದ ಗಾಯಗಳು ಶವ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿರುವುದನ್ನು ಕೂಡ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ಜೂನ್ 21ರಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಪಾಚೆಕೊ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಪಾಚೆಕೊ ಅಲ್ಲದೆ ಅವರ ಆಪ್ತ ಸಹಾಯಕ ಮೊಂಟೇರಿಯೋ ಅವರಿಗೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಾಂತ್ರಿಕ ಕಾರಣಗಳನ್ನು ನ್ಯಾಯಾಲಯ ಮುಂದಿಟ್ಟಿತ್ತು.
ಇಲಿ ಪಾಷಾಣ ಸೇವಿಸಿದ 15 ದಿನಗಳ ನಂತರ ಮೇ 30ರಂದು ನಾಡಿಯಾ ಚೆನ್ನೈಯ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದರು. ಆರಂಭದಲ್ಲಿ ಇದನ್ನು ಆತ್ಯಹತ್ಯಾ ಪ್ರಕರಣ ಎಂದು ಪರಿಗಣಿಸಲಾಗಿತ್ತಾದರೂ, ಸಂಶಯದ ಹಿನ್ನೆಲೆಯಲ್ಲಿ ಹತ್ಯಾ ಪ್ರಕರಣ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಮೇಲೆ ಹೇಳಿದ ಇಬ್ಬರೂ ಆರೋಪಿಗಳಾಗಿದ್ದಾರೆ.
ನಾಡಿಯಾ ಜತೆ ಪಾಚೆಕೊ ಅಕ್ರಮ ಸಂಬಂಧ ಹೊಂದಿದ್ದರು ಎಂದು ವರದಿಗಳು ಹೇಳಿದ್ದು, ಅವರ ಸಹಾಯಕನ ಜತೆ ಸೇರಿ ಸಾಕ್ಷ್ಯಗಳ ನಾಶಕ್ಕೆ ಯತ್ನಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಇದೀಗ ಸುಪ್ರೀಂ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿರುವುದರಿಂದ ಇಬ್ಬರೂ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ.