ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೊಲೀಸರ ಗಂಟಲು ಸೀಳಿ, ತಲೆ ಜಜ್ಜಿದ್ದಾರೆ ಮಾವೋಗಳು (Maoist | CRPF | Chhattisgarh | slit throats)
Bookmark and Share Feedback Print
 
ಮೊನ್ನೆಯಷ್ಟೇ ನಕ್ಸಲರು ಅಮಾನವೀಯ ರೀತಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸರನ್ನು ಮನಬಂದಂತೆ ಗುಂಡು ಹಾರಿಸಿ ಕೊಲೆಗೈದಿರುವುದು ತಿಳಿದೇ ಇದೆ. ಆದರೆ ಅಷ್ಟಕ್ಕೇ ಬಿಡದೆ ವಿಕೃತ ರಾಕ್ಷಸೀ ಮನೋಭಾವ ಮೆರೆದಿರುವ ಮಾವೋಗಳು ಪೊಲೀಸರ ಗಂಟಲು ಸೀಳಿ, ತಲೆಗಳನ್ನೂ ಜಜ್ಜಿ ಹಾಕಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಮಂಗಳವಾರ ಮಾವೋವಾದಿಗಳು 27 ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಹತ್ಯೆಗೈದಿದ್ದರು. ಆರಂಭದಲ್ಲಿ ತನಿಖೆ ನಡೆಸಿದಾಗ ಸಿಬ್ಬಂದಿಗಳನ್ನು ಗುಂಡಿಕ್ಕಿ ಕೊಂದಿರುವುದು ತಿಳಿದು ಬಂದಿತ್ತು.

ಮೊದಲು ದೂರದಿಂದ ಗುಂಡು ಹಾರಿಸಿ ಮೀಸಲು ಪೊಲೀಸರನ್ನು ನಕ್ಸಲರು ಕೊಂದು ಹಾಕಿದ್ದರು. ಬಳಿಕ ಹಲವು ಜವಾನರ ಮೃತದೇಹಗಳ ಮೇಲೆ ತಮ್ಮ ಸೇಡನ್ನು, ಆಕ್ರೋಶವನ್ನು ಕೆಂಪು ಉಗ್ರರು ತೋರಿಸಿದ್ದಾರೆ.

ಉನ್ನತ ಪೊಲೀಸ್ ಅಧಿಕಾರಿಗಳ ಪ್ರಕಾರ ಮೂವರು ಜವಾನರ ಗಂಟಲುಗಳನ್ನು ಸೀಳಲಾಗಿದೆ, ಅಲ್ಲದೆ ಇಬ್ಬರ ತಲೆಗಳನ್ನು ಒಡೆದು ಹಾಕಲಾಗಿದೆ. ಆರಂಭದಲ್ಲಿ ಇದು ಗುಂಡೇಟು ಎಂದು ಭಾವಿಸಲಾಗಿತ್ತಾದರೂ, ಮರಣೋತ್ತರ ಪರೀಕ್ಷೆಯಲ್ಲಿ ವಿಕೃತಿ ಮೆರೆದಿರುವುದು ಸ್ಪಷ್ಟವಾಗಿದೆ.

ಪ್ರತಿ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ಸರಾಸರಿ ಮೂರರಿಂದ ನಾಲ್ಕು ಗುಂಡುಗಳನ್ನು ಹಾರಿಸಿ ಕೊಂದು ಹಾಕಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರೂ ಪ್ರತಿದಾಳಿ ನಡೆಸಿದ್ದು, ನಕ್ಸಲರ ಪಾಳಯದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿರಬಹುದು ಎಂದು ಭದ್ರತಾ ಪಡೆಗಳು ಅಂದಾಜಿಸಿವೆ.

ಘಟನೆ ನಡೆದಿರುವುದು ದುರ್ಗಮ ಅರಣ್ಯ ಪ್ರದೇಶದಲ್ಲಾಗಿರುವುದರಿಂದ ಸಿಬ್ಬಂದಿಗಳ ಶವಗಳನ್ನು ಮತ್ತು ಬದುಕುಳಿದವರನ್ನು ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿತ್ತು.

ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮಾವೋವಾದಿಗಳು ಬೆಟ್ಟಗುಡ್ಡಗಳ ಮೇಲಿನಿಂದ ಗುಂಡು ಹಾರಿಸಿ ಭದ್ರತಾ ಪಡೆಗಳ ಕೈಕಟ್ಟಿ ಹಾಕಿದ್ದರು. ಆದರೂ ಪೊಲೀಸರು ತಮ್ಮ ಸಾಮರ್ಥ್ಯವನ್ನೂ ಮೀರಿ ಕರ್ತವ್ಯ ನಿರ್ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ