ಶ್ರೀನಗರದಲ್ಲಿ ಗುರುವಾರವೂ ಹಿಂಸಾಚಾರ ಮುಂದುವರಿದಿದ್ದು, ಕಾಶ್ಮೀರ ಕಣಿವೆಯಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಈ ನಡುವೆ ಅಮರನಾಥ ಯಾತ್ರೆಯೂ ಆರಂಭವಾಗಿದೆ. ಯಾತ್ರಾರ್ಥಿಗಳಿಗೆ ಗರಿಷ್ಠ ಭದ್ರತೆಯನ್ನು ಒದಗಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಶ್ರೀನಗರದ ಛತ್ತಬಾಲ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಹಿಂಸಾಚಾರಗಳು ನಡೆದ ಬಗ್ಗೆ ವರದಿಗಳು ಬಂದಿವೆ. ಮಹಿಳೆಯರ ಗುಂಪೊಂದು ಪ್ರತಿಭಟನೆಗೆ ಯತ್ನಿಸಿದಾಗ ಪೊಲೀಸರು ತಡೆದ ಸಂದರ್ಭದಲ್ಲಿ ಉದ್ವಿಗ್ನ ಪರಿಸ್ಥಿತಿ ಕಾಣಿಸಿಕೊಂಡಿತ್ತು. ನಂತರ ಭದ್ರತಾ ಸಿಬ್ಬಂದಿಗಳ ಜತೆ ಯುವಕರು ಕಾದಾಟಕ್ಕಿಳಿದಿದ್ದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಪ್ರತಿಭಟನೆ ಮತ್ತು ಕಲ್ಲುತೂರಾಟಗಳಲ್ಲಿ ಮಕ್ಕಳು, ಯುವಕರು ಮತ್ತು ಮಹಿಳೆಯರೂ ಕೂಡ ಪಾಲ್ಗೊಳ್ಳುತ್ತಿರುವ ಕಾರಣ ಮಹಿಳಾ ಭದ್ರತಾ ಸಿಬ್ಬಂದಿಗಳನ್ನೂ ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಯಾವುದೇ ಪ್ರತಿಭಟನೆ, ರ‌್ಯಾಲಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ನಿಷೇಧಾಜ್ಞೆಯನ್ನು ಯಥಾವತ್ತಾಗಿ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದಂತೆ ಸೋಪೋರೆ, ಬಾರಮುಲ್ಲಾ ಮತ್ತು ಅನಂತನಾಗ್ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಆಗಾಗ ಕಲ್ಲು ತೂರಾಟಗಳು ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಮರನಾಥ ಯಾತ್ರೆ ಆರಂಭ... ಕಣಿವೆ ರಾಜ್ಯದ ಹಲವೆಡೆ ನಿಷೇಧಾಜ್ಞೆ ಮುಂದುವರಿಯುತ್ತಿದ್ದಂತೆ ಯಾತ್ರಿಗಳ ಮೊದಲ ಗುಂಪು ಅಮರನಾಥ ಗುಹೆಯತ್ತ ಪ್ರಯಾಣ ಆರಂಭಿಸಿದೆ. ಇವರಿಗೆ ಭಾರೀ ಪ್ರಮಾಣದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರಾಜ್ಯದ ಮೂಲಗಳು ತಿಳಿಸಿವೆ.
ಅಮರನಾಥ ಯಾತ್ರೆಗೆ ಪ್ರಮುಖವಾಗಿ ಎರಡು ದಾರಿಗಳಿದ್ದು, ಎರಡನೇ ದಾರಿ ಪ್ರಸಕ್ತ ಕಠಿಣವಾಗಿದೆ. ಇದು ಜಮ್ಮುವಿನಿಂದ ಅನಂತನಾಗ್ ಮೂಲಕ ಸಾಗುತ್ತದೆ. ಪ್ರಸಕ್ತ ಶಾಂತಿಯತ್ತ ಸಾಗುತ್ತಿದ್ದರೂ, ನಿಷೇಧಾಜ್ಞೆ ಇಲ್ಲಿ ಮುಂದುವರಿದಿದೆ. ಮೊದಲನೇ ದಾರಿ ಶ್ರೀನಗರ. ಇಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ.
ತೀರ್ಥಯಾತ್ರೆಗೆ ಹೊರಟಿರುವ ಮೊದಲ ಗುಂಪಿನಲ್ಲಿ 1,200 ಯಾತ್ರಿಗಳಿದ್ದಾರೆ. ಎರಡನೇ ಗುಂಪು ಜಮ್ಮುವಿನಿಂದ ಇಂದು (ಗುರುವಾರ) ಹೊರಡಲಿದೆ. ಇದರಲ್ಲಿ 3,245 ಮಂದಿ ಪ್ರಯಾಣಿಸಲಿದ್ದಾರೆ. ಈ ವರ್ಷ ಲಕ್ಷಕ್ಕೂ ಅಧಿಕ ಮಂದಿ ಶಿವನ ದರ್ಶನಕ್ಕೆ ತೆರಳಲಿದ್ದು, ಮೂರು ಸಾವಿರಕ್ಕೂ ಹೆಚ್ಚು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.