ದಲಿತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಏನೆಲ್ಲ ಬೇಕಾಗಿದೆ ಎಂಬುದನ್ನು ಅರಿತುಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ವರಿಷ್ಠೆ ಮಾಯಾವತಿ ನೇರವಾಗಿ ಕಾಂಗ್ರೆಸ್ ಮಡಿಲಿಗೇ ಕೈ ಹಾಕಿದ್ದು, ರಾಹುಲ್ ಗಾಂಧಿಗೆ ಹಿನ್ನಡೆಯನ್ನುಂಟು ಮಾಡಲು ಯತ್ನಿಸಿದ್ದಾರೆ.
ರಾಹುಲ್ ಗಾಂಧಿ ಹಿಡಿತ ಹೊಂದಿರುವ ಅಮೇಠಿ ಮತ್ತು ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳನ್ನು ಛೇದಿಸಿ ಅದರಿಂದ ಹೊಸ ಜಿಲ್ಲೆಯೊಂದನ್ನು ಸೃಷ್ಟಿಸಿ ಇದೀಗ ಮಾಯಾವತಿಯವರ ಸರಕಾರ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಆ ಜಿಲ್ಲೆಗೆ ದಲಿತ ನಾಯಕನ ಹೆಸರಿಟ್ಟಿರುವುದು ವಿಶೇಷ. ರಾಯ್‌ಬರೇಲಿ ಮತ್ತು ಸುಲ್ತಾನ್‌ಪುರ್ ಜಿಲ್ಲೆಗಳಿಂದ ಪ್ರತ್ಯೇಕಗೊಂಡಿರುವ ನೂತನ ಜಿಲ್ಲೆಗೆ 'ಛತ್ರಪತಿ ಶಾಹುಜೀ ಮಹರಾಜ್ ನಗರ್' ಎಂದು ನಾಮಕರಣ ಮಾಡಲಾಗಿದೆ.
ಈ ನೂತನ ಜಿಲ್ಲೆಯಲ್ಲಿ ಸುಲ್ತಾನ್‌ಪುರದ ಮೂರು ಹಾಗೂ ರಾಯ್‌ಬರೇಲಿಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಲಿದೆ.
ಜಿಲ್ಲೆಯ ಸೃಷ್ಟಿಯಾಗಿದ್ದರೂ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಲೋಕಸಭಾ ಕ್ಷೇತ್ರದ ಹೆಸರು ಬದಲಾಗುವುದಿಲ್ಲ. ಅಲ್ಲದೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿಗೂ ಯಾವುದೇ ತೊಂದರೆಯಿಲ್ಲ. ಆದರೆ ದಲಿತರ ಹೆಸರನ್ನಿಟ್ಟಿರುವುದರಿಂದ ಬಿಎಸ್‌ಪಿ ಓಟ್ ಬ್ಯಾಂಕ್ ಕೊಳ್ಳೆ ಹೊಡೆಯಬಹುದು ಎಂದು ಹೇಳಲಾಗುತ್ತಿದೆ.
ರಾಜೀವ್ ಗಾಂಧಿ ಹೆಸರಿಡಬೇಕಿತ್ತು... ಹೀಗೆಂದು ಪ್ರತಿಕ್ರಿಯೆ ನೀಡಿರುವುದು ಕಾಂಗ್ರೆಸ್. ಈ ಕ್ಷೇತ್ರದ ಬಗ್ಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ವಿಶೇಷ ಒಲವಿತ್ತು. ಹಾಗಾಗಿ ಅವರ ಹೆಸರನ್ನೇ ಇಡಬೇಕಿತ್ತು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಖಿಲೇಶ್ ಪ್ರತಾಪ್ ಸಿಂಗ್ ಮತ್ತು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ತಿಳಿಸಿದ್ದಾರೆ.
ಅತ್ತ ಸಮಾಜವಾದಿ ಪಕ್ಷವೂ ಇದೊಂದು ವ್ಯರ್ಥ ಪ್ರಯತ್ನ ಎಂದು ಬಣ್ಣಿಸಿದೆ. ದಲಿತ ಮತಗಳನ್ನು ತನ್ನತ್ತ ಸೆಳೆದುಕೊಳ್ಳಲು ಬಹುಜನ ಸಮಾಜವಾದಿ ಪಕ್ಷ ಮಾಡಿರುವ ಯತ್ನ ಇದಾಗಿದ್ದು, ಜನತೆ ಇದನ್ನು ಮನಗಾಣಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಂಗೋಪಾಲ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.