ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 12ರ ಪೋರರಿಂದ 14ರ ಬಾಲಕಿಯ ಅತ್ಯಾಚಾರ, ಕೊಲೆ! (rape and murderer at 12 | New Delhi | Tilak Marg area | Rape)
Bookmark and Share Feedback Print
 
ಇದೆಂತಹಾ ಕಾಲ ಬಂತು ದೇವ್ರೇ? ಇನ್ನೂ ಕುಂಟೆ-ಬಿಲ್ಲೆ ಆಡಬೇಕಾಗಿದ್ದ ಹುಡುಗನೊಬ್ಬ ತನಗಿಂತ ಎರಡು ವರ್ಷ ಹಿರಿಯವಳನ್ನು ಅತ್ಯಾಚಾರ ಮಾಡಿದ್ದಾನೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಅನ್ನುವವರೇ ಜಾಸ್ತಿ. ಆದರೆ ಇದು ನಿಜ ಸಂಗತಿ, ನಡೆದಿರುವುದು ರಾಜಧಾನಿ ದೆಹಲಿಯಲ್ಲಿ. ಮತ್ತೊಂದು ಪ್ರಕರಣ ಕೊಲ್ಕತ್ತಾದಲ್ಲಿ ನಡೆದಿದೆ. ಇಲ್ಲಿ ಗಂಡು ಮಕ್ಕಳಿಬ್ಬರು ಸೇರಿಕೊಂಡು ಐದರ ಹೆಣ್ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾರೆ.

ಇದರೊಂದಿಗೆ ಕ್ರಿಮಿನಲ್‌ಗಳಿಗೆ ವಯಸ್ಸು ಮತ್ತು ದೈಹಿಕ ಕಟ್ಟುಮಸ್ತಿನ ಅಗತ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಮೊದಲ ಘಟನೆ ನಡೆದಿರುವುದು ದೆಹಲಿಯ ತಿಲಕ್ ಮಾರ್ಗ್ ಪ್ರದೇಶದಲ್ಲಿ. 14ರ ಹರೆಯ ಬಾಲಕಿಯನ್ನು 12ರ ಬಾಲಕನೊಬ್ಬ ಗುರುವಾರ ಅತ್ಯಾಚಾರ ಮಾಡಿದ್ದಾನೆ.

ಜೂನ್ 29ರಂದು ಈ ಘಟನೆ ನಡೆದಿದೆ. ಬಾಲಕಿ ರಾತ್ರಿ ಎಂಟರಿಂದ 10.30ರ ನಡುವೆ ಕಾಣೆಯಾಗಿದ್ದಳು. ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಂತರ ಅವಳೇ ಮನೆಗೆ ವಾಪಸ್ ಬಂದಿದ್ದಳು. ಆದರೆ ಬೆದರಿ ಮೌನವಾಗಿದ್ದ ಬಾಲಕಿ, ಯಾವುದೇ ವಿಚಾರವನ್ನೂ ಬಹಿರಂಗಡಿಸಲು ನಿರಾಕರಿಸಿದ್ದಳು.

ನಂತರ ಅತ್ಯಾಚಾರ ನಡೆದಿರುವುದನ್ನು ತಾಯಿಯ ಜತೆ ಹೇಳಿಕೊಂಡಿದ್ದಾಳೆ. ತಕ್ಷಣವೇ ತಿಲಕ್ ಮಾರ್ಗ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಬಾಲಕನನ್ನು ವಶಕ್ಕೆ ತೆಗೆದುಕೊಂಡು ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಿದ್ದಾರೆ. ವೈದ್ಯಕೀಯ ತಪಾಸಣೆಗಳ ಪ್ರಕಾರ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ.

ಬಲಿಪಶು ಬಾಲಕಿ ಮತ್ತು ಆರೋಪಿ ಬಾಲಕ ಇಬ್ಬರೂ ಇಲ್ಲೇ ಪಕ್ಕದ ಒಂದೇ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇಬ್ಬರ ಹೆತ್ತವರೂ ಸರಕಾರಿ ವಸತಿ ಗೃಹದಲ್ಲಿನ ಅಧಿಕಾರಿಗಳ ಮನೆಗೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಕತ್ತು ಹಿಸುಕಿ ಕೊಂದರು...
ಮತ್ತೊಂದು ಘಟನೆ ನಡೆದಿರುವುದು ಕೊಲ್ಕತ್ತಾದಲ್ಲಿ. 12 ಮತ್ತು 14ರ ಇಬ್ಬರು ಬಾಲಕರು ಐದರ ಹರೆಯ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ನಂತರ ಕೊಂದೇ ಹಾಕಿದ್ದಾರೆ.

ಇಲ್ಲಿನ 10 ಮಹಡಿಗಳ ಕಟ್ಟಡದ ಮೇಲ್ಭಾಗದಲ್ಲಿ ಘಟನೆ ನಡೆದಿದೆ. ಆರಂಭದಲ್ಲಿ ಇದು ವಯಸ್ಕರ ಕೃತ್ಯ ಎಂದು ಶಂಕಿಸಲಾಗಿತ್ತಾದರೂ, ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಇದು ಅಪ್ರಾಪ್ತರ ಕೃತ್ಯ ಎಂಬುದು ಬಯಲಾಗಿತ್ತು.

ಜುಂಜುಂ ದಾಸ್ ಎಂಬ ಬಾಲಕಿಯೇ ಕೊಲೆಯಾದವಳು. ಪೊಲೀಸರ ಪ್ರಕಾರ ಬಾಲಕರು ಕತ್ತು ಹಿಸುಕಿ ಕೊಂದು ಹಾಕಿದ್ದಾರೆ. ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿದೆ.

ಅಪರಾಧಗಳನ್ನು ಆಧರಿಸಿದ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳನ್ನು ನೋಡುತ್ತಾ ಬೆಳೆದ ಮಕ್ಕಳು ಕ್ರಿಮಿನಲ್ ಕೃತ್ಯಗಳತ್ತ ಹೆಚ್ಚು ಆಸಕ್ತರಾಗುತ್ತಾರೆ ಎಂದು ಹೇಳಲಾಗುತ್ತಿದ್ದು, ಆರೋಪಿ ಮಕ್ಕಳಿಗೆ ಮಾನಸಿಕ ಚಿಕಿತ್ಸೆಯನ್ನೂ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ