ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಹೀರೋ, ಎಲ್ಲಿ ಬೇಕಾದ್ರೂ ಪ್ರಚಾರ ಮಾಡಲಿ: ಬಿಜೆಪಿ (Narendra Modi | Bihar Assembly elections | Nitish Kumar | BJP)
Bookmark and Share Feedback Print
 
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಕಣಕ್ಕೆ ಇಳಿಸಬಾರದು ಎಂದು ಷರತ್ತು ವಿಧಿಸಿದ್ದ ಜೆಡಿಯುಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಮೋದಿ ನಮ್ಮ ನಾಯಕ, ಅವರು ಭಾರತದ ಎಲ್ಲಿ ಬೇಕಾದರೂ ಪ್ರಚಾರ ಮಾಡಬಹುದು ಎಂದು ಬಿಜೆಪಿ ಘಂಟಾಘೋಷವಾಗಿ ಸಾರಿದೆ.

ಮೋದೀಜಿ, ದಯವಿಟ್ಟು ಬಿಹಾರಕ್ಕೆ ಬನ್ನಿ. ನೀವು ಪ್ರಚಾರವನ್ನು ಕೈಗೊಂಡು, ಬಿಜೆಪಿಯ ಧ್ವಜವನ್ನು ಎತ್ತರಕ್ಕೇರಿಸಬಹುದು ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಹಾರದ ಉಸ್ತುವಾರಿ ಅನಂತ್ ಕುಮಾರ್ ಪಕ್ಷದ ಗುಜರಾತ್ ಘಟಕದ ಸಭೆಯಲ್ಲಿ ಆಹ್ವಾನ ನೀಡಿದರು.

ತನ್ನನ್ನು ಬಿಹಾರದ ಬಿಜೆಪಿ ಉಸ್ತುವಾರಿಯನ್ನಾಗಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಕಳುಹಿಸಿದ್ದಾರೆ ಎಂದೂ ಈ ಸಂದರ್ಭದಲ್ಲಿ ಅನಂತ್ ತಿಳಿಸಿದ್ದಾರೆ.

ಅದು ಬೆಂಗಳೂರು ಆಗಿರಬಹುದು ಅಥವಾ ಬನಾರಸ್, ಬಾಲಿಯಾ - ಭಾರತ್ ಅಥವಾ ಬಿಹಾರ -- ಪ್ರಚಾರಕ್ಕಾಗಿ ನಾವು ಅವರಿಗೆ ಆಹ್ವಾನ ನೀಡುತ್ತೇವೆ. ಅವರು ನಮ್ಮ ನಾಯಕ. ಎಲ್ಲಿ ಬೇಕಾದರೂ ಮೋದಿ ಪ್ರಚಾರ ಮಾಡಬಹುದು ಎಂದು ಅನಂತ್ ಕುಮಾರ್ ಹೇಳುತ್ತಿದ್ದಂತೆ ವೇದಿಕೆಯಲ್ಲಿದ್ದ ಅರುಣ್ ಜೇಟ್ಲಿ ಸೇರಿದಂತೆ ಹಿರಿಯ ನಾಯಕರು ಕರಾಡತನದೊಂದಿಗೆ ಸ್ವಾಗತಿಸಿದರು.

ಬಿಜೆಪಿಗೆ ಮೊಂಡುತನ ಯಾಕೆ?
ಹೀಗೆಂದು ಪ್ರಶ್ನಿಸಿರುವುದು ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ. ಮೋದಿಯವರನ್ನು ಬಿಹಾರಕ್ಕೆ ಕರೆ ತರಲೇಬೇಕೆಂಬ ವಿಚಾರದಲ್ಲಿ ಬಿಜೆಪಿ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ ಎಂದು ನಾಯಕ ಶಿವಾನಂದ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಗೆ ಇಡೀ ಭಾರತವನ್ನೇ ಆಳುವ ಬಯಕೆಯಿದೆ. ಆದರೆ ಒಂದೇ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯುವ ಕಾಲ ಮುಗಿದು ಹೋಗಿದೆ. ಈಗ ಮೈತ್ರಿ ಸರಕಾರಗಳ ಯುಗ. ಹೀಗಿದ್ದರೂ ಬಿಜೆಪಿ ಯಾಕೆ ಮೊಂಡುತನ ಪ್ರದರ್ಶಿಸುತ್ತಿದೆ? ಬಿಹಾರದಲ್ಲಿ ವಿವಾದವನ್ನು ಸೃಷ್ಟಿಸಲು ಯಾಕೆ ಯತ್ನಿಸುತ್ತಿದೆ ಎಂದು ಪ್ರಶ್ನಿಸಿದರು.

ಮೋದಿ ಮತ್ತು ನಿತೀಶ್ ಕುಮಾರ್ ಜತೆಗಿದ್ದ ಚಿತ್ರವುಳ್ಳ ಜಾಹೀರಾತನ್ನು ಗುಜರಾತ್ ಸರಕಾರ ಪ್ರಕಟಿಸಿದ್ದನ್ನೇ ಮುಂದಿಟ್ಟುಕೊಂಡಿದ್ದ ಬಿಹಾರ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ತೊಡೆತಟ್ಟಿ ಜಗಳಕ್ಕೆ ಇಳಿದಿದ್ದರು. ಮೋದಿ ಮತ್ತು ವರುಣ್ ಗಾಂಧಿಯವರು ಬಿಹಾರ ಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯದೇ ಇರುವುದಾದರೆ ಮೈತ್ರಿ ಮುಂದುವರಿಯುತ್ತದೆ ಎಂಬ ಪರೋಕ್ಷ ಬೆದರಿಕೆಯನ್ನೂ ಹಾಕಿದ್ದರು.

ಆದರೆ ಇದಕ್ಕೆ ಬಿಜೆಪಿ ಸೊಪ್ಪು ಹಾಕಿಲ್ಲ. ಜೆಡಿಯು ಯಾವುದೇ ನಿಬಂಧನೆಯನ್ನು ಹೇರುವ ಹಾಗಿಲ್ಲ. ನಮ್ಮ ಪಕ್ಷದಿಂದ ಪ್ರಚಾರ ಮಾಡುವ ಕುರಿತು ನಾವೇ ನಿರ್ಧಾರ ಮಾಡಬೇಕೇ ಹೊರತು ಇತರ ಪಕ್ಷಗಳಲ್ಲ ಎಂದು ತಿರುಗೇಟು ನೀಡಿದೆ. ಇದೀಗ ಸ್ವತಃ ಬಿಜೆಪಿಯೇ ಮೋದಿಯವರನ್ನು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದು, ಮುಸ್ಲಿಮರ ಮತಕ್ಕಾಗಿ ಜಾತ್ಯತೀತ ಮುಖವಾಡ ತೊಡಲು ಯತ್ನಿಸುತ್ತಿರುವ ನಿತೀಶ್‌ಗೆ ತೀವ್ರ ಮುಖಭಂಗವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ