ಆಪ್ತ ಗೆಳತಿ ನಾಡಿಯಾ ಟೊರಾಡೋ ಸಾವಿನ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಗೋವಾ ಪ್ರವಾಸೋದ್ಯಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಫ್ರಾನ್ಸಿಸ್ಕೋ ಮಿಕ್ಕಿ ಪಾಚೆಕೊ ಶನಿವಾರ ಬೆಳಿಗ್ಗೆ ಮಡ್ಗಾಂವ್ ಸೆಷನ್ಸ್ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.
ಪಾಚೆಕೊ ಅವರು ಕ್ರೈಂ ಬ್ರಾಂಚ್‌ಗೆ ನಾಳೆ ಬೆಳಿಗ್ಗೆ ಸ್ವತಃ ತಾನೇ ಲಭ್ಯರಾಗಲಿದ್ದಾರೆ ಎಂದು ಅವರ ವಕೀಲ ಅಮಿತ್ ಪಾಲೇಕರ್ ನಿನ್ನೆಯಷ್ಟೇ ಪತ್ರಕರ್ತರಿಗೆ ತಿಳಿಸಿದಂತೆ ಇಂದು ಅವರು ಶರಣಾಗಿದ್ದಾರೆ.
ಇಲಿ ಪಾಷಾಣ ಸೇವಿಸಿದ 15 ದಿನಗಳ ನಂತರ ಮೇ 30ರಂದು ನಾಡಿಯಾ ಚೆನ್ನೈಯ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದರು. ಆರಂಭದಲ್ಲಿ ಇದನ್ನು ಆತ್ಯಹತ್ಯಾ ಪ್ರಕರಣ ಎಂದು ಪರಿಗಣಿಸಲಾಗಿತ್ತಾದರೂ, ಸಂಶಯದ ಹಿನ್ನೆಲೆಯಲ್ಲಿ ಹತ್ಯಾ ಪ್ರಕರಣ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ನಾಡಿಯಾ ಜತೆ ಪಾಚೆಕೊ ಅಕ್ರಮ ಸಂಬಂಧ ಹೊಂದಿದ್ದರು ಎಂದು ವರದಿಗಳು ಹೇಳಿದ್ದು, ಅವರ ಸಹಾಯಕ ಲಿಂಡನ್ ಮೊಂಟೇರಿಯೋ ಜತೆ ಸೇರಿ ಸಾಕ್ಷ್ಯಗಳ ನಾಶಕ್ಕೆ ಯತ್ನಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಇವರಿಬ್ಬರ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದರಿಂದ ಅನಿವಾರ್ಯವಾಗಿ ಶರಣಾಗತರಾಗಿದ್ದಾರೆ.
27ರ ಹರೆಯದ ನಾಡಿಯಾ ಸಾವಿನ ಹಿಂದೆ 46ರ ಪಾಚೆಕೊ ಕೈವಾಡವಿದೆ. ಅವರ ಚಿತಾವಣೆಯಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕ್ರೈ ಬ್ರಾಂಚ್ ಮಾಜಿ ಸಚಿವರನ್ನು ವಿಚಾರಣೆಗೂ ಒಳಪಡಿಸಿತ್ತು. ತದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಭೂಗತರಾಗಿದ್ದರು.
ಬಂಧನ ಭೀತಿಯಲ್ಲಿದ್ದ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಯಶಸ್ಸು ಪಡೆದಿರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲೂ ಪಾಚೆಕೊಗೆ ಗೆಲುವು ಲಭಿಸಿರಲಿಲ್ಲ. ಎನ್‌ಸಿಪಿ ಶಾಸಕ ಹಾಗೂ ಪ್ರಮುಖ ರಾಜಕಾರಣಿಯಾಗಿರುವ ಕಾರಣ ಸಾಕ್ಷ್ಯ ನಾಶಗಳಿಗೆ ಯತ್ನಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಜಾಮೀನು ಅಸಾಧ್ಯ ಎಂದು ನ್ಯಾಯಾಲಯ ಪಾಚೆಕೊ ಮನವಿಯನ್ನು ಪುರಸ್ಕರಿಸಿರಲಿಲ್ಲ.